ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಾಹಿತಿ ಪುಟ ಜಾತ್ರಾ ಕಾರ್ಯಕ್ರಮಗಳು ಜಾತ್ರಾ ಆರ್ಕಷಣೆ ಜಾತ್ರಾ ಗ್ಯಾಲರಿ ಸಂರ್ಪಕಿಸಲು
boat

ಶ್ರೀ ಗವಿಮಠದ ಜಾತ್ರೆಯ ಕುರಿತು ನಾಡಿನ ವಿವಿಧ ಮಠಾಧೀಶರ, ಗಣ್ಯ ಮಾನ್ಯರ ನುಡಿಮುತ್ತುಗಳು

Gavisiddeshwara

“ಶ್ರೀ ಗವಿಸಿದ್ಧೇಶ್ವರ ಜಾತ್ರೆಯನ್ನು ನೋಡಿದ ನಂತರ ಅನ್ನಿಸಿದ್ದು, ಇಂತಹ ಅದ್ಭುತ ಜಾತ್ರೆ ಆ ಸ್ವರ್ಗದಲ್ಲೂ ನೆಡೆಯುವುದಿಲ್ಲ. ನನ್ನ 80 ವರ್ಷದ ಜೀವನದಲ್ಲಿ ನಾನು ಇಂತಹ ಜನಸ್ತೋಮವನ್ನು ಪ್ರಪಂಚದಲ್ಲಿ ಎಲ್ಲಿಯೂ ನೋಡಿಲ್ಲ. ಎಲ್ಲಿಯೂ ಇಂತಹ ಉತ್ಸವ ನಡೆಯುವುದಿಲ್ಲ”.

- ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರರು, ಮಹಾರಾಷ್ಟ್ರ.

(2018ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡ ಸಂದರ್ಭದಲ್ಲಿ)

“ನಾನು ಹರಿದ್ವಾರ, ಅಲಹಾಬಾದ್, ನಾಸಿಕದಲ್ಲಿ ಕುಂಭಮೇಳ ನೊಡಿದ್ದೇನೆ, ಅಲ್ಲಿ ಕಾರ್ಯಕ್ರಮ ಹಾಗೂ ಯೋಗ ಶಿಬಿರಗಳನ್ನು ಮಾಡಿದ್ದೇನೆ, ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಮೇಲೆ ಕೊಪ್ಪಳದಲ್ಲಿ ಶ್ರದ್ಧೆ ಮತ್ತು ಭಕ್ತಿಗಳ ಮತ್ತೊಂದು ಮಹಾ ಕುಂಭಮೇಳವೇ ನಡೆಯುತ್ತಿದೆ, ಎಂದು ಅನಿಸುತ್ತದೆ. ಅಲ್ಲಿ 12 ವರ್ಷಕೊಮ್ಮೆ ಕುಂಭಮೇಳ ನಡೆದರೆ, ಇಲ್ಲಿ ಪ್ರತಿ ವರ್ಷವು ಮಹಾಕುಂಭಮೇಳವೇ ನಡೆಯುತ್ತದೆ. ಇದು ದಕ್ಷಿಣ ಭಾರತದ ಮಹಾ ಕುಂಭಮೇಳ”.

- ಯೋಗಗುರು ಶ್ರೀ ಬಾಬಾ ರಾಮದೇವಜೀ ಮಹಾರಾಜ.

(2009ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಈ ದೇಶದಲ್ಲಿ ಜ್ಯಾತ್ಯಾತೀತವಾಗಿ ಭಕ್ತರು ಸೇರುವ ತಾಣಗಳೆಂದರೆ ಕಾಶಿ-ಹರಿದ್ವಾರ. ಅಲ್ಲಿ ನಡೆಯುವ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರುತ್ತಾರೆ. ಕೊಪ್ಪಳವು ಕಾಶಿ-ಹರಿದ್ವಾರಗಳಂತಹ ಧಾರ್ಮಿಕ ತಾಣ. ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮ ಶ್ರೀ ಗವಿಸಿದ್ಧೇಶ್ವರನ ಜಾತ್ರೆ; ಇದು ಕರುನಾಡಿನ ಪುಣ್ಯ. ಜ್ಯಾತ್ಯಾತೀತವಾಗಿ ಭಕ್ತರನ್ನು ಒಗ್ಗುಡಿಸುತ್ತಾ ನಾಡಿನ ಜನರನ್ನು ಒಂದೆಡೆಗೆ ಸೆಳೆಯುತ್ತಿದೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆ. ದೇಶದ ಮೂಲೆ ಮೂಲೆಗಳಲ್ಲಿ ಅಡ್ಡಾಡಿದ್ದೇನೆ; ಇಷ್ಟೊಂದು ಜನ ಸೇರುವ ಕಾರ್ಯಕ್ರಮವನ್ನು ನಾನು ನೋಡಿಯೇ ಇಲ್ಲ! ಉಡುಪಿಯ ಪರ್ಯಾಯಕ್ಕಿಂತಲೂ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆದೊಡ್ಡ ಕಾರ್ಯಕ್ರಮ!!”

- ಶ್ರೀ ವಿಶ್ವೇಶತೀರ್ಥ ಪಾದಂಗಳು, ಪೇಜಾವರ ಮಠ, ಉಡುಪಿ.

(2012ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

Gavisiddeshwara “ನಾನು ಪ್ರಪಂಚದ ಅನೇಕ ದೇಶಗಳಲ್ಲಿ ಸುತ್ತಾಡಿದ್ದೇನೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆಯಲ್ಲಿ ಕಂಡುಬರುವ ಭಕ್ತಿಯ ಸಾಗರ ಹಾಗೂ ಭಕ್ತರ ಮಹಾಸಾಗರ ಬೇರೆಲ್ಲೂ ಕಂಡುಬರುವದಿಲ್ಲ. ಇಲ್ಲಿ ಜಗತ್ತಿನ ಏಕಮುಖ ಪ್ರಜ್ಞೆಜಾಗೃತವಾಗಿದೆ. ಶ್ರೀ ಗವಿಮಠ ಹಾಗೂ ಶ್ರೀ ಗವಿಸಿದ್ಧೇಶ್ವರ ಮಹಾಜಾತ್ರೆ ನಾಡಿನಲ್ಲಿ ಧರ್ಮಜಾಗೃತಿ ಉಂಟು ಮಾಡುವ ಸುಸಂದರ್ಭ. ಇದು ಪ್ರತಿ ಮನೆ-ಮನಗಳಲ್ಲಿ ಸದ್ಭಾವನೆಯನ್ನುಂಟು ಮಾಡುವತಾಣ”.

- ಶ್ರೀ ಶ್ರೀ ಶ್ರೀ ರವಿಶಂಕರ ಗುರೂಜಿ.

(2013ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆ ಭಾರತದ ಧರ್ಮ ಮತ್ತು ಭಕ್ತಿಯ ಪ್ರತೀಕವಾಗಿದೆ. ಧರ್ಮ ಮತ್ತು ಜಾತಿಯನ್ನು ಮೀರಿ ನಿಂತಿರುವ ಈ ಜಾತ್ರೆ ಇಡೀ ದೇಶದ ಶ್ರೇಷ್ಠ ಜಾತ್ರೆಗಳಲ್ಲೊಂದಾಗಿದೆ. ಲಕ್ಷಾಂತ ಜನರು ಇಲ್ಲಿಗೆ ಬಂದು ದೇವರ ದರ್ಶನ ಪಡೆಯಲು ಕಾರಣವೆಂದರೆ, ಗವಿಮಠ ಭಕ್ತಿಯ ಮೂಲ ಕೇಂದ್ರಗಳಲ್ಲೊಂದು. ಇಂತಹ ಕೇಂದ್ರಗಳನ್ನು ಸನ್ನಿಧಾನ ಕ್ಷೇತ್ರಗಳೆಂದು ಕರೆಯಲಾಗುತ್ತದೆ. ತಿರುಪತಿ, ಧರ್ಮಸ್ಥಳ ಸನ್ನಿಧಾನ ಕ್ಷೇತ್ರಗಳಾಗಿವೆ. ಶ್ರೀ ಗವಿಸಿದ್ಧೇಶ್ವರನ ಈ ಪವಿತ್ರ ತಾಣವೂ ಸಹ ಸನ್ನಿಧಾನ ಕ್ಷೇತ್ರಗಳ ಪಾಲಿಗೆ ಸೇರುತ್ತವೆ”.

- ಪದ್ಮಭೂಷಣಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ.

(2011ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಇದು ಮಹಾ ಜನಸಾಗರ; ಮಹಾಜನಸಾಗರ; ಮಹಾಜನಸಾಗರ; ಜನಜಾತ್ರೆ. ಈ ದೇಶದ ಅದ್ಭುತ ಜನ ಸಾಗರದ ಜಾತ್ರೆಯೆಂದರೇ ಓಡಿಶಾದ ಪುರಿಯ ಶ್ರೀ ಜಗನ್ನಾಥಜಾತ್ರೆ. ಅದನ್ನೂ ಮೀರಿಸುವಂತಹ ಜಾತ್ರೆ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ”.

- ಭಾರತರತ್ನ ಪ್ರೊ|| ಸಿ.ಎನ್.ಆರ್.ರಾವ್ ಜವಾಹರಲಾಲ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರು, ಬೆಂಗಳೂರು

(2016ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

Gavisiddeshwara

“ಇಂತಹ ಮಹಾ ಜನಸಾಗರವನ್ನು ನಾನು ನನ್ನ ಜೀವನದಲ್ಲಿಯೇ ನೋಡಿಲ್ಲ. ಕತಾರ್ ದೇಶದಲ್ಲಿ ನೆರೆದಿದ್ದ ಪರ್ತಕತ್ರರ ಸಮ್ಮೇಳನದಲ್ಲಿ ಅದೇ ತಾನೆ ನನಗೆ ಸಿಕ್ಕ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ರಥೋತ್ಸವದ ಚಿತ್ರಗಳನ್ನು ಸರ್ಬಿಯ ದೇಶದ ಪತ್ರಕರ್ತರೊಬ್ಬರಿಗೆ ತೋರಿಸಿದೆ. ಆ ಜನಸಾಗರವನ್ನು ನೋಡಿದ ಆತ ಇಷ್ಟೊಂದು ಜನ ಸೇರಲು ಸಾಧ್ಯವಾ? ಎಂದು ಕೇಳಿದ. ತೀರಾ ಆಶ್ವರ್ಯಪಟ್ಟ ಆತ. ವಿವಿಧ ದೇಶಗಳಿಂದ ಅಲ್ಲಿ ನೆರೆದಿದ್ದ ಪತ್ರಕರ್ತರಿಗೆ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ರಥೋತ್ಸವದ ಚಿತ್ರಗಳನ್ನು ತೋರಿಸುತ್ತಾ ನಡೆದೆ. ಕೊಪ್ಪಳದ ಮಣ್ಣಿನಲ್ಲಿ ಇಲ್ಲಿನ ಸಾಧು-ಸಂತರಲ್ಲಿ ಅದ್ಭುತ ಶಕ್ತಿ ಇದೆ. ಶ್ರೀ ಗವಿಮಠವು ಕೇವಲ ಕೊಪ್ಪಳವನ್ನಲ್ಲ, ಬದಲಾಗಿ ಇಡೀ ನಾಡನ್ನು ಆವರಿಸಿರುವ ಒಂದು ಆಲದ ಮರ. ಶ್ರೀ ಗವಿಸಿದ್ಧೇಶ್ವರ ಜಾತ್ರೆ ಒಂದು ಅಪರೂಪವಾದ ಒಂದು ಆದರ್ಶವಾದ ಜಾತ್ರೆ”.

- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ

(2015ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಯಾವ ಕಲ್ಯಾಣವನ್ನು ಬಸವಣ್ಣ ಕಟ್ಟಬೇಕೆಂದಿದ್ರೋ; ಯಾವುದನ್ನ ಬಸವಣ್ಣ ದಾಸೋಹ ಅಂತಿದ್ರೋ; ಅದರ ಪ್ರಯೋಗ ಕೊಪ್ಪಳದ ಶ್ರೀ ಗವಿಮಠದಲ್ಲಿ ನಡೆಯುತ್ತಿದೆ. ಇಲ್ಲಿ ಅನ್ನದ ಪವಾಡ; ಅರಿವಿನ ಪವಾಡ ನಡೆಯುತ್ತಿದೆ. ಇದು ಕರ್ನಾಟಕದ ಮಟ್ಟಿಗೆ ಪ್ರಯೋಗ, ಇಲ್ಲಗೆ ಬಂದಿದ್ದಕ್ಕೆ ನನ್ನ ಕಣ್ಣುಗಳು ತೆರೆದವು. ಕಲ್ಯಾಣದಲ್ಲಿ 12ನೇ ಶತಮಾನದಲ್ಲಿ ನಡೆದ ಪ್ರಯೋಗ ಪುನಃ ಕೊಪ್ಪಳದಲ್ಲಿ ನಡೆಯುತ್ತಿದೆ”.

- ಶ್ರೀ ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕತರು.

(2014ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಜೀವನವೇ ಸಂಭ್ರಮದ ಕ್ಷಣಗಳ ಯಾತ್ರೆಯಾಗಿರುವಾಗ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವದ ನಿಮಿತ್ಯ ನಿಸರ್ಗದ ಬಯಲು ಬೆಟ್ಟ-ಗುಡ್ಡಗಳ ಮೇಲೆ ಬೇಧ-ಭಾವವಿಲ್ಲದೆ ಒಗ್ಗೂಡಿರುವ ಭಕ್ತ ಸಾಗರವನ್ನು ದರ್ಶಿಸುವದೊಂದು ಸಂಭ್ರಮದ ಕ್ಷಣ”.

- ಪರಮಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮಿಗಳು, ಜ್ಞಾನಯೋಗಾಶ್ರಮ, ವಿಜಯಪೂರ

(2017ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

Gavisiddeshwara

“ಅನ್ನ, ಅರಿವು, ಆಧ್ಯಾತ್ಮ ಜೊತೆಗೆ ಭಕ್ತಿ ಮಾರ್ಗದಲ್ಲಿ ಕ್ರಿಯಾಶೀಲರಾಗಿರುವ ಶ್ರೀ ಗವಿಮಠವು ಭಕ್ತರ ನಾಡಿಯಾಗಿದೆ. ಈ ಮಠದ ಕರ್ತೃ ಗವಿಸಿದ್ಧೇಶ್ವರರು ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ಉತ್ತಮ ಸಂಸ್ಕಾರವನ್ನು ಕೊಟ್ಟು, ಶ್ರೀಮಠಕ್ಕೆ ಅರ್ಪಿಸಿರುವುದು ಯೋಗ್ಯ”.

- ಶ್ರೀ ಮ. ನಿ. ಪ್ರ.ಜ. ಡಾ. ಅನ್ನದಾನೇಶ್ವರ ಮಹಾಶಿವಯೋಗಿಗಳು, ಮುಂಡರಗಿ.

(2008ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಇಲ್ಲಿನಜನ ಶ್ರೀ ಗವಿಮಠದ ಪ್ರಸಾದವನ್ನು ಮಾತ್ರ ಸೇವಿಸುತ್ತಿಲ್ಲ; ಜ್ಞಾನ ಪ್ರಸಾದವನ್ನು ಆಸ್ವಾದಿಸುತ್ತಿದ್ದಾರೆ. ಅಂತಹ ವೈಚಾರಿಕ ಕಾರ್ಯವನ್ನು ಶ್ರೀ ಗವಿಮಠ ಮಾಡುತ್ತಿದ್ದು, ಶ್ಲ್ಯಾಘನೀಯ”.

- ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಮುರುಘಾಮಠ, ಚಿತ್ರದುರ್ಗ.

(2009ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಈ ನಾಡಿನೊಳಗೆ ಜನ ಗವಿಸಿದ್ಧನ ಮೇಲೆ ಭಕ್ತಿ ಇಟ್ಟು ಕೊಂಡಂತವರು. ಶ್ರೀ ಗವಿಸಿದ್ಧೇಶ್ವರರು ಭಕ್ತಿಯನ್ನು ತುಂಬುವ ಸಲುವಾಗಿ ಶ್ರೀಮಠಕ್ಕೆ ಬಂದಂತವರು. ಶ್ರೀ ಗವಿಮಠ ಭಕ್ತರ ಭಕ್ತಿಯ ಮೇಲೆ ನಿಂತಿದೆ”.

- ಶ್ರೀ ಮ. ನಿ. ಪ್ರ.ಜ. ಬಸವಲಿಂಗ ಮಹಾಸ್ವಾಮಿಗಳು, ಗವಿಮಠ, ನವಲಗುಂದ.

(2011ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

“ಸಮಾಜದ ಓರೆಕೋರೆಗಳನ್ನು ತಿದ್ದುವಲ್ಲಿ ಶ್ರೀ ಗವಿಮಠ ದಾಪುಗಾಲು ಹಾಕುತ್ತಲಿದೆ. ಅಂತೆಯೇ ಸಮಾಜ, ಧರ್ಮ, ಶೈಕ್ಷಣಿಕ ಮುಖಗಳಲ್ಲಿ ಶ್ರೀ ಗವಿಮಠ ಸಮಾಜಮುಖಿ ಚಿಂತನೆಯನ್ನು ಮಾಡುತ್ತಿದೆ. ಈ ಮಹಾ ಜಾತ್ರೆ ಈ ಭಾಗದ ಭಕ್ತರ ಹೃದಯವಾಗಿದೆ”.

- ಶ್ರೀ ಶಿವಶಾಂತವೀರ ಶರಣರು, ಬಳಗಾನೂರ

(2005ರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ)

ಸಂಸ್ಥಾನ ಶ್ರೀ ಗವಿಮಠದ ಪೇಸ ಬುಕ್ ಪುಟವನ್ನು ಲೈಕ್ ಮಾಡಿ

ಶರಣು ಬನ್ನಿ

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಜರುಗುವ ಕಾರ್ಯಕ್ರಮಗಳ ಹಿನ್ನಲೆ

Gavisiddeshwara

1) ಬಸವ ಪಟ ಆರೋಹಣ ಕಾರ್ಯಕ್ರಮ :

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ 4 ದಿನ ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ 5 ಸುತ್ತ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟ ಕಟ್ಟುತ್ತಾರೆ. ಇದುವೇ ‘ಬಸವ ಪಟ ಆರೋಹಣ’. ಶ್ರೀ ಗವಿಸಿದ್ಧನ ಸನ್ನಿಧಿಯಲ್ಲಿ ಬಸವ ಪಟ ಆರೋಹಣ ಮಾಡುವ ಉದ್ದೇಶವೆಂದರೆ ನಮ್ಮದು ಕೃಷಿ ಪ್ರಧಾನ ನಾಡು. ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ವರ್ಷಪೂರ್ತಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ ‘ಬಸವ ಪಟ ಆರೋಹಣ’ ಕಾರ್ಯಕ್ರಮವು ಜರುಗುತ್ತದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.

Gavisiddeshwara

2) ಪಂಚ ಕಳಸೋತ್ಸವ :

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ 4 ದಿನ ‘ಬಸವ ಪಟ ಆರೋಹಣ’ ಎಂಬ ಧಾರ್ಮಿಕ ಕಾರ್ಯಕ್ರಮ ಜರುಗಿದ ಬೆನ್ನಲ್ಲೇ ಪಂಚ ಕಳಸೋತ್ಸವ ಕಾರ್ಯಕ್ರಮ ಜರುಗುತ್ತದೆ. ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀ ಗವಿಮಠದ ಕರ್ತೃ ಶ್ರೀ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿನಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು, ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ. ನಂತರ ಅವುಗಳನ್ನು ಸ್ವಚ್ಚಗೊಳಿಸಿ, ಶೃಂಗಾರಗೊಳಿಸಿ ಶ್ರೀ ಗವಿಮಠಕ್ಕೆ ತರುತ್ತಾರೆ. ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು. ಶ್ರೀ ಗೌರಿಶಂಕರ ದೇವಸ್ಥಾನದಿಂದ ಶ್ರೀಮಠಕ್ಕೆ ಬರುವದು. ಎರಡನೆಯದು ವಿ.ಕೆ. ಸಜ್ಜನರು ಮಾಡಿಸಿದ ಕಳಸ. ಅವರ ಮನೆಯಿಂದ ಶೀ ಗವಿಮಠಕ್ಕೆ ಬರುವದು. ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ ಶ್ರೀಮಠಕ್ಕೆ ಬರುವದು. ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಇವುಗಳನ್ನು ಬನದ ಹುಣ್ಣಿಮೆಯ ದಿವಸವೇ ಆಯಾ ಓಣಿಯ ದೈವದವರು ಐದು ಕಳಸಗಳನ್ನು ಭಾಜಾ-ಭಜಂತ್ರಿ, ಭಜನೆ, ಡೊಳ್ಳು ಕುಣಿತದೊಂದಿಗೆ ಗವಿಮಠಕ್ಕೆ ತಂದು, ಗೋಪುರಕ್ಕೇರಿಸಿ, ಪೂಜೆ ಮಾಡಿಸಿ, ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ. ರಾತ್ರಿ ಈ ಕಾರ್ಯಕ್ರಮ ಜರುಗಿದ ನಂತರ ಗವಿಮಠಕ್ಕೆ ಆಗಮಿಸಿದ ಜಂಗಮಯೋಗಿಗಳಿಗೆ ಪ್ರಸಾದ , ದಕ್ಷಿಣೆ, ತಾಂಬೂಲಾದಿಗಳನ್ನು ನೀಡಿ ಜಂಗಮಾರಾಧನೆ ಮಾಡಲಾಗುತ್ತದೆ.

3) ಕಳಸೋತ್ಸವ :

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಬನದ ಹುಣ್ಣಿಮೆಯಂದು ಸಾಯಂಕಾಲ 6 ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ. ಶ್ರೀ ವೀರನಗೌಡರು ಲಿಂಗನಗೌಡ ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಭಾಜಾ-ಭಜಂತ್ರಿ, ಭಜನೆ, ಡೊಳ್ಳು-ಕುಣಿತ, ನಂದಿಕೋಲಿನೊಂದಿಗೆ ಸಾವಿರ ಸಾವಿರ ಭಕ್ತರಾದಿಯಾಗಿ ಕೊಪ್ಪಳದ ಶ್ರೀಮಠಕ್ಕೆ ಬರುತ್ತದೆ. ಈ ಮೆರವಣಿಗೆಯಲ್ಲಿ ಹಲಗೇರಿ ಗ್ರಾಮದ ಸದ್ಭಕ್ತರು ಹಾಗೂ ಗೌಡರ ಮನೆತನದವರು ಭಾಗವಹಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಜಂಗಮೋತ್ಸವದ ಮೆರವಣಿಗೆಯನ್ನು ಕೂಡಿಕೊಂಡು ಹೊರಟು, ನಂತರ ರಾತ್ರಿ ಹೊತ್ತು ಗವಿಮಠ ತಲುಪವದು. ಜಂಗಮೋತ್ಸವ ಮತ್ತು ಕಳಸೋತ್ಸವ ಭಕ್ತಿ-ಭಾವಗಳ ಸಮ್ಮಿಲನವಾಗಿರುತ್ತದೆ. ಹಿರಿ-ಕಿರಿಯರೆನ್ನದೇ ಊರ ಬಹುದೊಡ್ಡ ಹಬ್ಬವಾಗಿ, ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರನ ಜೈಕಾರದ, ಭಕ್ತಿಪೂರ್ವಕ ಘೋಷಣೆಗಳು ಮುಗಿಲು ಮುಟ್ಟುತ್ತಿರುತ್ತವೆ. ಮಾರ್ಗದ ಎಡ-ಬಲಕ್ಕೂ ದೈವಾರಾಧನೆಗೆ ಸಾಕ್ಷಿಯಾಗಿ ಜನಜಾತ್ರೆಯೇ ನೆರೆದಿರುತ್ತದೆ. ಸದ್ಭಕ್ತರು ಮಹಾರಥೋತ್ಸವದ ಕಳಸ ಹಾಗೂ ಶ್ರೀ ಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ. ಇದೇ ದಿವಸ ಮುದ್ದಾಬಳ್ಳಿಯ ಭೋಜಗೌಡ ಪಾಟೀಲರ ಇವರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯಿಂದ ಹೊರಟು ಶ್ರೀಮಠಕ್ಕೆ ಬರುತ್ತದೆ. ನಂತರ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ತಮ್ಮ ಗ್ರಾಮಕ್ಕೆ ತೆರಳುತ್ತಾರೆ.

4) ಪಲ್ಲಕ್ಕಿ ಮಹೋತ್ಸವ:

ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಬನದ ಹುಣ್ಣಿಮೆಯಂದು ಸಾಯಂಕಾಲ 6 ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ. ಶ್ರೀ ವೀರನಗೌಡರು ಲಿಂಗನಗೌಡ ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಗವಿಮಠಕ್ಕೆ ಬಂದ ಈ ಸುದಿನವೇ ಪಲ್ಲಕ್ಕಿ ಮಹೋತ್ಸವ ಜರುಗುತ್ತದೆ. ಶ್ರೀ ಗವಿಮಠದ 11 ಪೀಠಾಧೀಶರಾಗಿದ್ದ ಜ|| ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೇ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಢರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೇ ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ ಅಂದರೆ (ಜಡೆ)ಯನ್ನೇ ತೆಗೆದುಕೊಟ್ಟರು ಆಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿತು. ಈ ಕಾರಣಕ್ಕಾಗಿ ಶ್ರೀ ಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ಬಾಜಾ ಬಜಂತ್ರಿಯೊಂದಿಗೆ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವದು ಸತ್‍ಸಂಪ್ರದಾಯ. ಜಡೇಗೌಡರ ಮನೆಯಲ್ಲಿಯೇ ಪೂಜಾದಿಗಳನ್ನು ತೀರಿಸಿಕೊಂಡು ಬಂದ ಗವಿಸಿದ್ದೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನಲೆಯು ಇದರಲ್ಲಿ ಅಳವಟ್ಟಿದೆ.

Gavisiddeshwara

5) ಉಡಿ ತುಂಬುವ ಕಾರ್ಯಕ್ರಮ :

ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನ ಬರುವ ಮಂಗಳವಾರ ಇಲ್ಲವೇ ಶುಕ್ರವಾರದ ದಿನ ಪ್ರತಿವರ್ಷ ಶೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗುತ್ತದೆ. ಈ ಕಾರ್ಯಕ್ರಮದಲ್ಲಿ ಇರಕಲ್‍ಗಡಾ ಗ್ರ್ರಾಮದ ಜೈ ಸಂತೋಷಿಮಾತಾ ಮಂದಿರದ ಪೂಜ್ಯ ಶ್ರೀಮತಿ ರತ್ನಮ್ಮ ತಾಯಿಯವರು ಸುಮಾರು 20-25 ವರ್ಷಗಳಿಂದಲೂ ತಮ್ಮ ಅಸಂಖ್ಯಾತ ಭಕ್ತರು ಹಾಗೂ ಅನುಯಾಯಿಗಳೊಂದಿಗೆ ಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ನೈವೇದ್ಯವಾಗುತ್ತದೆ. ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಈ ಮೂಲಕ ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು, ಮೊದಲಾದ ಮಹಿಳಾ ಬಳಗದವರು ಭಾಗವಹಿಸುತ್ತಾರೆ.

6) ಲಘು ರಥೋತ್ಸವ :

ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನÀ ಲಘು ರಥವನ್ನು ಎಳೆಯುವದು ಒಂದು ಸಂಪ್ರದಾಯ. ಇದಕ್ಕೆ ‘ಉಚ್ಛಾಯ’ ಎಂತಲೂ ಕರೆಯುತ್ತಾರೆ. ಅಂದು ಸಾಯಂಕಾಲ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ಜರುಗುವುದು ವಾಡಿಕೆ. ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ. ಮುಂದಿನ ಮಹಾರಥೋತ್ಸವ ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಈ ಲಘು ರಥೊತ್ಸವ ನೆರವೇರಿಸಲಾಗುತ್ತದೆ.

7) ಮಹಾರಥೋತ್ಸವ :

ಶ್ರೀ ಗವಿಮಠದ 11 ನೇ ಪೀಠಾಧಿಪತಿಗಳಾದ ಪವಾಡಪುರುಷರು, ಮಹಾತಪಸ್ವಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃಗದ್ದುಗೆಯೇ ಗವಿಮಠದ ಕೇಂದ್ರಸ್ಥಾನ. ಇವರ ಮೂಲ ಹೆಸರು ಗುಡದಯ್ಯ. ಕೊಪ್ಪಳಕ್ಕೆ ಸಮೀಪದ ಮಂಗಳಾಪುರ ಗ್ರಾಮದಲ್ಲಿ ಹುಟ್ಟಿ, ವಯಸ್ಸಿಗೆ ಸಹಜವಲ್ಲದ ಚಟುವಟಿಕೆಗಳಿಂದ ಎಲ್ಲರಲ್ಲಿ ಬೆರಗು ಹುಟ್ಟಿಸಿದ್ದರು. ಬಾಲ್ಯದಲ್ಲಿ ಸದಾ ಏಕಾಂತವಾಗಿ ಅಡವಿ, ಗುಡ್ಡದಲ್ಲೆಲ್ಲಾ ಅಲೆಯುತ್ತಾ, ದನ ಕಾಯುತ್ತಾ, ಪವಾಡಗಳನ್ನು ತೋರಿಸಿದ್ದ ಇತಿಹಾಸವಿದೆ. ದನ ಕಾಯುತ್ತಿರುವಾಗ ಯಾವನೋ ಒಬ್ಬ ಆಕಳÀಕ್ಕೆ ಕಲ್ಲು ಒಗೆದಾಗ ಆಕಳು ಸತ್ತು ಹೋಗಿ, ಗುಡದಯ್ಯನು ಬಂದು ತನ್ನ ಕರಸ್ಪರ್ಶದಿಂದ ಸತ್ತ ಆಕಳಿಗೆ ಜೀವದಾನ ಮಾಡಿದನೆಂದು, ಬದುಕಿದ ಆಕಳÀ ಯಜಮಾನರಾದ ಕೊಪ್ಪಳದ ಬಸವನಗೌಡರು ಆ ಹುಡುಗನನ್ನು ನೋಡಬೇಕೆಂದು ತಮ್ಮ ಮನೆಗೆ ಕರೆದುಕೊಂಡು ಬಂದರಂತೆ. ಈ ಸುದ್ಧಿಯು ಅಂದಿನ ಗವಿಮಠದ 10ನೇ ಪೀಠಾಧಿಪತಿಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳ ಕಿವಿಗೆ ಬಿದ್ದು ಆ ಬಾಲಲೀಲಾ ಪವಾಡ ಪುರುಷನನ್ನು ಬಸವನಗೌಡರಿಂದ ಗವಿಮಠಕ್ಕೆ ಕರೆಸಿಕೊಂಡು ಆ ಹುಡುಗ (ಗುಡದಯ್ಯ) ನಲ್ಲಿದ್ದ ಅಲೌಕಿಕ ಶಕ್ತಿಯನ್ನು, ತೇಜಸ್ಸನ್ನು ಗುರುತಿಸಿ ಗವಿಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿಕೊಳ್ಳಲು ಬಸವನಗೌಡರಲ್ಲಿ ಹಾಗೂ ಗುಡದಯ್ಯನ ತಂದೆ-ತಾಯಿಗಳಲ್ಲಿ ವಿನಂತಿಸಿದಾಗ ಬಾಲಕ ಗುಡದಯ್ಯನನ್ನು ಲೋಕಕಲ್ಯಾಣಕ್ಕಾಗಿ ಗವಿಮಠಕ್ಕೆ ಕೊಟ್ಟರೆಂದು ಇತಿಹಾಸ ಸಾರುತ್ತದೆ. ಇಂತಹ ಬಾಲಲೀಲಾ ಯೋಗಿ ಗವಿಮಠದ ಪೀಠಾಧಿಕಾರವನ್ನು ಹೊಂದಿ ಭಕ್ತರ ಕಾಮಧೇನುವಾಗಿ ನೊಂದವರ, ಬೆಂದವರ, ಮಕ್ಕಳ, ಮುಗ್ಧರ, ವೃದ್ಧರ, ಬಾಲೆಯರ, ಶೀಲೆಯರ, ಮೂಕರ, ಕಿವುಡರ, ರೋಗಿಗಳೆಲ್ಲರ ಇಷ್ಟಾರ್ಥಗಳನ್ನು ಈಡೇರಿಸುವ ದಯಾನಿಧಿಯಾಗಿ ಕೊಪ್ಪಳದ ಆರಾಧ್ಯದೈವವಾಗಿ, ಆಗಾಗ ಲೋಕ ಬೆರಗಾಗುವಂತಹ ಪವಾಡಗಳನ್ನು ಜರುಗಿಸಿದ್ದು ಇತಿಹಾಸವಾಗಿದೆ. ಹೈದರಾಬಾದ್ ನವಾಬನ ಕುಷ್ಟರೋಗ ಕಳೆದದ್ದು, ಅಮವಾಸ್ಯೆಯ ದಿನ ಚಂದ್ರನನ್ನು ತೋರಿಸಿದ್ದು, ಸತ್ತ ಆಕಳ ಬದುಕಿಸಿದ್ದು ಹೀಗೆ ಅನೇಕ ಪವಾಡಗಳನ್ನು ತೋರಿಸಿ ಜನಮಾನಸದಲ್ಲಿ ಶ್ರೀ ಗವಿಸಿದ್ಧೇಶ್ವರರಾಗಿ ಶಾಶ್ವತವಾಗಿದ್ದಾರೆ. ಇವರ ಗುರುಗಳಾದ ಶ್ರೀಮಠದ 10ನೇ ಪೀಠಾಧಿಪತಿಗಳು ಪೂಜ್ಯ ಚನ್ನಬಸವಮಹಾಸ್ವಾಮಿಗಳು ತಾವು ಲಿಂಗೈಕ್ಯರಾಗಲು ಕಟ್ಟಿಸಿದ್ದ ಗದ್ದುಗೆಯಲ್ಲಿ ಅವರಿಗಿಂತ ಮೊದಲು ತಾವೇ ಕುಳಿತು ಜೀವಂತ ಸಮಾಧಿಯಾಗಿರುವುದು ಈ ಜಾಗೃತ ಸ್ಥಳದ ಮಹಿಮಾ ವೈಶಿಷ್ಟ್ಯವಾಗಿದೆ. ಈ ಸ್ಮರಣೆಗಾಗಿ ಶ್ರೀ ಗವಿಮಠಕ್ಕೆ ಪ್ರತಿವರ್ಷ ಪುಷ್ಯ ಬಹುಳ ಬಿದಿಗೆಯಂದು ಶ್ರೀ ಗವಿಸಿದ್ಧೇಶ್ವರನ ಮಹಾರಥವನ್ನು ಎಳೆಯುವದರ ಮೂಲಕ ಇಲ್ಲಿನ ಜನರು ಜಾತ್ರೆಯನ್ನು ಇಡೀ ಊರಿನ ಬಹು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಮಹಾರಥೋತ್ಸವದಲ್ಲಿ ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಭಕ್ತರ ಜಯಘೋಷಗಳು ಮುಗಿಲು ಮುಟ್ಟುತ್ತಿರುತ್ತವೆ. 5-6 ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಸುತ್ತಮುತ್ತಲ ಹಳ್ಳಿಗಳಿಂದ, ನಗರ ಪ್ರದೇಶಗಳಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್, ಲಾರಿ, ಬಸ್ಸು, ಕಾರು ಮೊದಲಾದ ವಾಹನಗಳನ್ನು ಮಾಡಿಕೊಂಡು ಆಗಮಿಸುತ್ತಾರೆ. ಜಾತ್ರಾ ನಿಮಿತ್ಯವಾಗಿ ಕೊಪ್ಪಳದ ಬಹುತೇಕ ಮನೆಗಳು ಬಂಧು-ಬಳಗದವರಿಂದ ತುಂಬಿ ಹೋಗಿರುತ್ತದೆ. ಸಂಭ್ರಮ-ಸಡಗರ, ಭಕ್ತಿ-ಭಾವಗಳ ಧನ್ಯತಾಭಾವದಿಂದ ಈ ಮಹಾಜಾತ್ರೆಯಲ್ಲಿ ಪಾಲ್ಗೊಂಡು ಸಕಲರೂ ಶ್ರೀ ಗವಿಸಿದ್ಧೇಶ್ವರ ಕೃಪೆಗೆ ಪಾತ್ರರಾಗುತ್ತಾರೆ. ತಮ್ಮ ಹರಕೆಗಳನ್ನು ಸಲ್ಲಿಸಿ ತೃಪ್ತಭಾವ ಹೊಂದುತ್ತಾರೆ.

8) ಶರಣರ ದೀರ್ಘದಂಡ ನಮಸ್ಕಾರ :

ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ಜರುಗಿದ ಎರಡನೆಯ ದಿನÀ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರವು ಕಾರ್ಯಕ್ರಮವೂ ಒಂದು ವಿಶಿಷ್ಟವಾದುದು. ಇದು ಕೂಡಾ ಶ್ರೀಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕುತ್ತದೆ. ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು 50 ವರ್ಷಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಅವರ ಲಿಂಗೈಕ್ಯದ ನಂತರ ಬಳಗಾನೂರಿನ ಶರಣಾದ ಶ್ರೀ ಶಿವಶಾಂತವೀರ ಶರಣರು ತಮ್ಮ ಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮವನ್ನು ನೋಡಲು ಜಾತ್ರೆಯಷ್ಟೇ ಜನರು ಆಗಮಿಸಿ ಶರಣರ ದರ್ಶನಾಶಿರ್ವಾದ ಪಡೆಯುತ್ತಾರೆ. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು, ಭಕ್ತರೆಲ್ಲರ ಎದೆಯಲ್ಲಿ ‘ಗವಿಸಿದ್ಧ, ಗವಿಸಿದ್ಧ’ ಎಂಬ ವಾಣಿ ಪ್ರತಿಧ್ವನಿಸಿರುತ್ತಿದೆ.

9) ಸಿದ್ಧೇಶ್ವರ ಮೂರ್ತಿ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮ :

ಜಾತ್ರೆಯ ಎರಡನೆಯ ದಿನದ ಮತ್ತೊಂದು ವಿಶೇಷÀ ಕಾರ್ಯಕ್ರಮ ಎಂದರೆ ಶ್ರೀ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಭಕ್ತಿ ಭಾವಗಳೊಂದಿಗೆ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮವಾಗಿದೆ. ಪಲ್ಲಕ್ಕಿಮಹೋತ್ಸವ, ಕಳಸೋತ್ಸವದ ಮೆರವಣಿಗೆಗಳಂತೆ ಈ ಮೆರವಣಿಗೆಯೂ ಸಾವಿರ ಸಾವಿರ ಭಕ್ತರ ನೇತೃತ್ವದಲ್ಲಿ ಬರುತ್ತದೆ. ಜನ ಬಳಕೆಯಲ್ಲಿ ಇದನ್ನು ಸಿದ್ಧೇಶ್ವರ ಮೂರ್ತಿ ಎನ್ನಲಾಗುತ್ತದೆ. ಅಂದು ಸಾಯಂಕಲ ಭಕ್ತರು ಶ್ರೀ ಸಿದ್ಧೇಶ್ವರ ಮೂರ್ತಿಯನ್ನು ದಶಮಿದಿಂಡಿನ ಮಂಟಪದಲ್ಲಿ ಕೂಡಿಸಿಕೊಂಡು ಶ್ರೀ ಗವಿಮಠದಿಂದ ಪೂಜೆ ಸಲ್ಲಿಸಿಕೊಂಡೇ ನಂದಿನಗರಕ್ಕೆ ಕರೆತಂದಿರುತ್ತಾರೆ. ಅಲ್ಲಿ ಭಕ್ತರು ಸಿದ್ಧೇಶ್ವರ ಮೂರ್ತಿಗೆ ಹೂವಿನ ಹಾರ ಹಾಕಿ, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ-ಭಾವ ಮೆರೆಯುತ್ತಾರೆ. ನಂತರ ಈ ಮೆರವಣಿಗೆ ಕವಲೂರು ಓಣಿ, ಕಿತ್ತೂರು ಚನ್ನಮ್ಮ ಸರ್ಕಲ್, ಜವಾಹರ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರದ ಮಾರ್ಗವಾಗಿ ರಾತ್ರಿ ಶ್ರೀ ಗವಿಮಠದ ಬೆಟ್ಟದ ಮೂಲಕ ಹಾದು, ಶ್ರೀಗವಿಮಠ ಪ್ರವೇಶಿಸಿ ಪೂಜ್ಯ ಶ್ರೀಗಳು ಆಸೀನರಾಗುವ ಸ್ಥಳದ ಮುಂಭಾಗದಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿಯ ತೊಟ್ಟಿಲನ್ನು ಕಟ್ಟಲಾಗುತ್ತದೆ. ಜಾತ್ರೆಗೆ ಬಂದ ಹರಕೆ ಹೊತ್ತ ಭಕ್ತರು ಶ್ರೀ ಸಿದ್ಧೇಶ್ವರ ಮೂರ್ತಿಯ ತೊಟ್ಟಿಲನ್ನು ತೂಗಿ ಧನ್ಯರಾಗುತ್ತಾರೆ.

10) ಮದ್ದು ಸುಡುವ ಕಾರ್ಯಕ್ರಮ :

ಇದು ಕೂಡಾ ಶ್ರೀ ಗವಿಮಠದ ಜಾತ್ರೆಯ 2 ನೇ ದಿನದ ಮತ್ತೊಂದು ಅದ್ದೂರಿ ಕಾರ್ಯಕ್ರಮ. ಇದೊಂದು ಸಂಪ್ರದಾಯವು ಹೌದು. ರಾತ್ರಿ 11 ರ ಸುಮಾರಿಗೆ ಶ್ರೀ ಸಿದ್ಧೇಶ್ವರಮೂರ್ತಿ ಶ್ರೀ ಗವಿಮಠವನ್ನು ತಲುಪುತ್ತಿದ್ದಂತೆ ಆಕಾಶದ ತುಂಬೆಲ್ಲ ಬೆಳಕಿನ ರಾಶಿಯೇ ಹರಿದಾಡುತ್ತದೆ. ಶ್ರೀ ಗವಿಮಠದ ಹೊರಾಂಗಣದಲ್ಲಿ ಜರುಗುವ ಈ ಘನ ಕಾರ್ಯಕ್ರಮಕ್ಕೂ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಿರುತ್ತಾರೆ. ಬೆಟ್ಟದ ಸಾಲುಗಳ ತುಂಬೆಲ್ಲ, ಮೈದಾನದ ಸುತ್ತಲೂ, ಶಾಲಾ, ಕಾಲೇಜು, ಮನೆಗಳ ಮೇಲೆ ನಿಂತುಕೊಂಡು ಬೆಳಕಿನ ಪುಂಜಗಳು ನಕ್ಕು ನಲಿಯುವ ದೃಶ್ಯವನ್ನು ಸಾಕ್ಷೀಕರಿಸಿಕೊಂಡು, ಆ ಮೂಲಕ ಭಕ್ತರು ಮುಗಿಲು ಮುಟ್ಟುವ ಘೋಷಗಳೊಂದಿಗೆ ಜಯಕಾರ ಹಾಕುವ, ಕೊನೆಯಲ್ಲಿ ಶ್ರೀ ಗವಿಸಿದ್ಧೇಶ್ವರರನ್ನು ಮನದಾಳದಿಂದ ಕೊಂಡಾಡುವ ಭಕ್ತವಾಣಿ ಮೊಳಗಲಾರಂಭಿಸುತ್ತದೆ. ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವು ನಿರ್ವಿಘ್ನವಾಗಿ, ಸಾಂಗತ್ಯವಾಗಿ, ಯಶಸ್ವಿಯಾಗಿ ಜರುಗಿದ ಸಂಕೇತವಾಗಿಯೂ ಮತ್ತು ಧಾರ್ಮಿಕ ``ಈ ಜಾತ್ರೆಯ ವಿಜಯೋತ್ಸವದ ಸಂಕೇತವಾಗಿಯೂ ಈ ದಿನ ರಾತ್ರಿ ಬಣ ್ಣಬಣ್ಣಗಳ, ಅಲಂಕಾರಿಕ, ಆಕರ್ಷಕವಾದ ಮದ್ದುಗಳನ್ನು ಸುಡುತ್ತಾರೆ. ಹೊಸತಾಗಿ ಮದುವೆಯಾದವರು, ತೇರನ್ನು ದಂಪತಿಗಳ ಸಮೇತ ನೋಡಿದವರು ಮದ್ದುಸುಡುವ ಸಂಭ್ರಮವನ್ನು ಸವಿಯುತ್ತಾರೆ ಇದಕ್ಕೆ ಧಾರ್ಮಿಕವಾಗಿ ‘ಕಡಬಿನ ಕಾಳಗ’ವೆಂತಲೂ ಕರೆಯುತ್ತಾರೆ.

ಸಂಸ್ಥಾನ ಶ್ರೀ ಗವಿಮಠದ ಪೇಸ ಬುಕ್ ಪುಟವನ್ನು ಲೈಕ್ ಮಾಡಿ

ಜಾತ್ರೆಯ ಪ್ರಮುಖ ಆರ್ಕಷಣೆ

ಗವಿಸಿದ್ಧೇಶ್ವರರ ಪೂರ್ವನಾಮ ಗುಡದಯ್ಯವೆಂಬುದಾಗಿತ್ತು. ಚನ್ನಬಸವ ಮಹಾಸ್ವಾಮಿಗಳವರು ಸಕಲ ಸಂಸ್ಕಾರವನ್ನು ನೀಡಿ ಶ್ರೀಮಠದ 11ನೇ ಅಧಿಪತಿಯನ್ನಾಗಿ ನೇಮಿಸಿ ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳೆಂದು ಅಭಿದಾನವನ್ನಿತ್ತರು. ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಆಧ್ಯಾತ್ಮದಾಸೋಹಗಳನ್ನು ನಿತ್ಯ ನಿರಂತರ ತಮ್ಮ ಕಾಯಕವನ್ನಾಗಿ ಮಾಡಿಕೊಂಡು ಬಂದವರು. ಸಮಾಜ್ಯೋದ್ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದ ಪೂಜ್ಯರು, ಗುರುಗಳ ಅಗಲಿಕೆಯ ಅನುತಾಪವನ್ನು ಕೇಳಿ ಗುರುಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳಿಗಾಗಿಯೇ ಸಿದ್ದಪಡಿಸಿದ್ದ ಸಮಾಧಿಯಲ್ಲಿ ತಾವೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಹೀಗೆ ಸಜೀವ ಸಮಾಧಿಹೊಂದಿದ ಪೂಜ್ಯರನ್ನು ಗುರುಗಳು ಮುಂದಿನ ಕಾರ್ಯವನ್ನು ನೆರವೇರಿಸಿದರು. ಅಂದಿನಿಂದ ಇಂದಿನವರೆಗೂ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ನಿತ್ಯ ನಿರಂತರವಾಗಿ ಸಾಗಿಬಂದಿದೆ. ಪೂಜ್ಯ ರುದ್ರಮುನಿ ಶಿವಯೋಗಿಗಳವರಿಂದಲೇ ಆರಂಭಗೊಂಡ ಶ್ರೀಮಠದ ಭವ್ಯ ಪರಂಪರೆ ಈಗಾಗಲೇ 18 ಪೀಠಾಧೀಶ್ವರರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಥೋತ್ಸವ ಈ ನಾಡಿನ ಬಹುದೊಡ್ಡ ಹಬ್ಬವಾಗಿ ಪರಿಣಮಿಸಿದೆ. ಜ.ಮರಿಶಾಂತವೀರ ಹಾಗೂ ಜ.ಶಿವಶಾಂತವೀರ ಶಿವಯೋಗಿಗಳವರ ತಪ ಶಕ್ತಿಯಿಂದ ಶ್ರೀಮಠವು ಬಹುದೊಡ್ಡ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆದಿದೆ.

Snow

ಮಹಾರಥೋತ್ಸವ

ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೆ ಪ್ರಖ್ಯಾತಿಯಾಗಿದೆ.

ಪರಮ ಪೂಜ್ಯ ಚಿಕ್ಕೆನಕೊಪ್ಪದ ಶರಣ ದಿರ್ಘದಂಡ ನಮಸ್ಕಾರಗಳು

ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೆ ಪ್ರಖ್ಯಾತಿಯಾಗಿದೆ.
Snow
Lights

ಕೈಲಾಸ ಮಂಟಪದಲ್ಲಿನ ಕಾರ್ಯಕ್ರಮಗಳು

ನಾಡಿನ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಜರುಗುತ್ತದೆ. ವೇದಿಕೆಯು ನೈರ್ಸಗಿಕವಾಗಿದ್ದು ವಿಹಂಗಮವಾಗಿದೆ.

ಮದ್ದು ಸುಡುವದು

ಇದಕ್ಕೆ ಕಡುಬಿನ ಕಾಳಗ ಎಂದು ಕೂಡಾ ಕರೆಯುತ್ತಾರೆ. ಜಾತ್ರೆಯ ಯಶಸ್ಸಿನ ಸಂಕೇತವಾಗಿ ಆಗಸದಲ್ಲಿ ಚಿತ್ತಾರಗಳನ್ನು ಮೂಡಿಸುವ ಈ ಕಾರ್ಯಕ್ರಮವನ್ನು ವಿಕ್ಷಿಸಲು ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ.
Snow
Snow

ತೆಪ್ಪೋತ್ಸವ

ಗವಿಮಠದ ಕೆರೆಯಲ್ಲಿ ಜರುಗುವ ಈ ತೆಪ್ಪೋತ್ಸವ ಅತ್ಯಂತ ಆರ್ಕಷಣೀಯವಾಗಿದೆ.

ಮಹಾ ಪ್ರಸಾದ

ಗವಿಸಿದ್ಧೇಶ್ವರ ಜಾತ್ರೆಯ ಪ್ರಸಾದದ ವೈವಿಧ್ಯತೆ ವರ್ಣಿಸಲು ಅಸಾಧ್ಯ.
Snow
+

ಸಂಗ್ರಹ ವಿಭಾಗ


Contact Us

Address

Samsthan Shree Gavimath

State:Karnataka Dist:Koppal Tq: Koppal At: Koppal-583231

08539-220212

 srigavimathkoppal@gmail.com

Follow Us

Powered by w3.css

Go To Top