ಶ್ರೀ ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮಠದ ಐತಿಹ್ಯ ಶ್ರೀ ಪರಂಪರೆ ಸಂಗ್ರಹ ವಿಭಾಗ ( ಗ್ಯಾಲರಿ ) ಸಂರ್ಪಕಿಸಲು
boat

ಕತೃ ಶ್ರೀ ಗವಿಸಿದ್ಧೇಶ್ವರರ ಕುರಿತು

Gavisiddeshwara

ಕೊಪ್ಪಳ ಹಾಗೂ ಕೊಪ್ಪಳ ನಾಡಿಗೆ ಅಪೂರ್ವ ಇತಿಹಾಸವಿದ್ದಂತೆಯೇ ಅಷ್ಟೇ ಹಿರಿದಾದ ಇತಿಹಾಸ, ಭವ್ಯ ಪರಂಪರೆ ಸಂಸ್ಥಾನ ಗವಿಮಠಕ್ಕೂ ಇದೆ. 1008ರಲ್ಲಿಯೇ ಪೂಜ್ಯ ಜ|| ರುದ್ರಮುನಿ ಶಿವಯೋಗಿವರ್ಯರಿಂದ ಸಂಸ್ಥಾಪಿಸಲ್ಪಟ್ಟ ಗವಿಮಠ ಈಗಾಗಲೇ ಹದಿನೆಂಟು ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೂ ಪಾತ್ರವಾಗಿದೆ. ಶ್ರೀ ಗವಿಮಠದ ಭವ್ಯ ಪರಂಪರೆಯಲ್ಲಿ ಸಾಗಿ ಬಂದ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಅನೇಕ ಜನಪರ ಕಾರ್ಯಗಳನ್ನು, ಸಮಾಜೋಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಈ ನಾಡನ್ನು, ನಾಡವರನ್ನೂ ಉದ್ಧರಿಸಿದ್ದಾರೆ. ಪೂಜ್ಯರು ಗೈದ ಕಾರ್ಯಗಳೆಲ್ಲವೂ ಭಾವುಕ ಭಕ್ತಿರಿಗೆ ಪವಾಡ ಸದೃಶ್ಯಗಳಾಗಿ ಕಂಡಿವೆ. ಇಂತಹ ಜನಪರ ಕಾರ್ಯಗಳನ್ನು ಮಾಡಿದ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಜನಮಾನಸದಲ್ಲಿ ಇಂದಿಗೂ ನೆಲೆಯೂರಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ತಮಗಿಂತ ಹಿಂದಿನ ಎಲ್ಲಾ ಶಿವಯೋಗಿಗಳವರನ್ನು ಮರೆಯಿಸಿಬಿಟ್ಟಿದ್ದಾರೆ. ಭಕ್ತರ ಹೃನ್ಮಂದಿರದಲ್ಲಿ ಸ್ಥಾನವನ್ನು ತೆಗೆದಿರಿಸಿದ್ದಾರೆ. ಕೊಪ್ಪಳದ ನೆರೆಯ ‘ಮಂಗಳಾಪುರ’ವೇ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಜನ್ಮಸ್ಥಳ. ಮಾಹೇಶ್ವರ ದಂಪತಿಗಳಾಗಿದ್ದ ಮಹಾದೇವಯ್ಯ ಹಾಗೂ ಗುರುಲಿಂಗಮ್ಮನವರೇ ಪೂಜ್ಯರ ತಂದೆ ತಾಯಿಗಳು.ಶ್ರೀಮಠದ ಅಂದಿನ ದಶಮ ಪೀಠಾಧೀಶರಾಗಿದ್ದ ಜ|| ಚನ್ನಬಸವ ಶಿವಯೋಗಿಗಳ ಆಂತರ್ಯದ ಧ್ವನಿಗೆ ಓಗೊಟ್ಟಂತೆ, ಗವಿಮಠದತ್ತ ಪಯಾಣಿಸಿದ ಗವಿಸಿದ್ಧೇಶ್ವರರು ಗುರುಗಳ ಸಾನಿಧ್ಯದಲ್ಲಿ ಅಧ್ಯಯನ ನಿರತರಾದರು.ಅನ್ನದಾಸೋಹ-ಅಕ್ಷರದಾಸೋಹ-ಆಧ್ಯಾತ್ಮ ದಾಸೋಹಗಳಂತಹ ತ್ರಿವಿಧ ದಾಸೋಹಗಳನ್ನು ತಮ್ಮ ನಿರಂತರ ಕಾಯಕವನ್ನಾಗಿ ಮಾಡಿಕೊಂಡು ಬಂದ ಶ್ರೀಮಠದ ಎಲ್ಲ ಶಿವಯೋಗಿಗಳಂತೆ ಗವಿಸಿದ್ಧೇಶ್ವರರು ಈ ಕಾರ್ಯದಲ್ಲಿಯೇ ನಿರತರಾದರು. ಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶ್ರೀಮಠದ ಹನ್ನೊಂದನೇ ಪೀಠಾಧಿಪತಿಗಳಾಗಿ ಸಮಾಜೋಧಾರ್ಮಿ ಕಾರ್ಯಗಳಲ್ಲಿಯೇ ಸದಾ ತಲ್ಲಿನರಾಗಿರುತ್ತಿದ್ದರು.

ಜ|| ಚನ್ನಬಸವ ಮಹಾಸ್ವಾಮಿಗಳವರು ಗವಿಸಿದ್ಧೇಶ್ವರರನ್ನು ಕುರಿತು “ನಾ ಬಂದ ಕಾರ್ಯ ಮುಗಿಯಿತು, ಜಗದ ಜೀವಿಗಳ ರಕ್ಷಣೆ ಇನ್ನೂ ಮೇಲೆ ನಿನ್ನ ಹೆಗಲ ಮೇಲಿದೆ, ಸುಖದಿಂದ ಲಿಂಗದೊಳು ಬೆರೆಯುವೆ” ಎಂಬ ಗುರುಗಳ ನುಡಿಯನ್ನು ಕೇಳಿದ ಗವಿಸಿದ್ಧೇಶ್ವರರಿಗೆ ಕಣ್ಣಲ್ಲಿ ನೀರು ಉಕ್ಕಿ ಬಂದಿತು. ಗುರುಗಳ ಅಗಲಿಕೆಯನ್ನು ಸಹಿಸದೇ, ಗುರುಗಳಿಗಾಗಿಯೇ ತಯಾರಿಸಿದ್ದ ಸಮಾಧಿಯನ್ನೇರಿ ಲಿಂಗಪೂಜೆಯೋಳೇ ನಿರತರಾಗಿ ಆ ಲಿಂಗದ ಬೆಳಗಿನಲ್ಲಿಯೇ ಶಾ.ಶ 1735 (ಕ್ರಿ.ಶ 1816) ಪುಷ್ಯ ಬಹುಳ ಬಿದಗಿಯಂದು ಲಿಂಗೈಕ್ಯರಾದರು. ಗುರು ಚನ್ನಬಸವಸ್ವಾಮಿಗಳವರೇ ಮುಂದಿನ ಕಾರ್ಯಗಳನ್ನು ನೆರವೆರಿಸಿದರು. ಗುರುಗಳಿಂದಲೇ ಗೌರವಿಸಿಕೊಂಡ ಸಜೀವ ಸಮಾಧಿ ಸಂಯುತ ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಯ ಜಾತ್ರಾ ಮಹೋತ್ಸವ ಅಂದಿನಿಂದ ಇಂದಿನವರೆಗೂ ನಿರಂತರ ಸಾಂಗವಾಗಿ ಜರುಗುತ್ತಾ ಬಂದಿದೆ. ಕ್ರಿ.ಶ 1816 ರಿಂದ ಇಂದಿನವರೆಗೂ ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಭೂತಪೂರ್ವವಾಗಿ ನೆರವೇರುತ್ತಾ ಬಂದಿದೆ.

ಸಂಸ್ಥಾನ ಶ್ರೀ ಗವಿಮಠದ ಪೇಸ ಬುಕ್ ಪುಟವನ್ನು ಲೈಕ್ ಮಾಡಿ

ಸಂಸ್ಥಾನ ಶ್ರೀ ಗವಿಮಠದ ಐತಿಹ್ಯ.


ಗವಿಶ್ರೀ ಸಂಪದ

ಕೊಪ್ಪಳ ಶ್ರೀ ಗವಿಮಠವು ಕನ್ನಡನಾಡಿನ ಪ್ರಾಚೀನ ವೀರಶೈವ ಮಠಗಳಲ್ಲೊಂದಾಗಿದೆ. ಈ ಪರಂಪರೆಯಲ್ಲಿ ಮಹಿಮಾತಿಶಯರಾದ 17 ಶಿವಯೋಗಿಗಳು ಈ ವರೆಗೆ ಆಗಿಹೋಗಿದ್ದು, ಈಗಿರುವ ಶ್ರೀ ಮ.ನಿ.ಪ್ರ.ಸ್ವ. ಜಗದ್ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು 18 ನೆಯ ಪೀಠಾಧೀಪತಿಗಳಾಗಿದ್ದಾರೆ.ಕಲ್ಲಿನ ಬೆಟ್ಟವನ್ನೇ ಕೈಲಾಸವಾಗಿರಿಸಿದ ಗವಿಮಠದ ಗಟ್ಟಿಯಾದ ಎರಡು ಆಧಾರಸ್ತಂಭಗಳೆಂದರೆ, ಒಂದು ಹಿಂದಿನ ಎಲ್ಲ ಪೂಜ್ಯ ಶಿವಯೋಗಿಗಳವರ ತಪಃ ಶಕ್ತಿ; ಇನ್ನೊಂದು ಶ್ರೀಮಠದ ಭಕ್ತರ ಭಕ್ತಿ.

ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ನಿಂದ ನಡೆಯುವ ಶಿಕ್ಷಣ ಸಂಸ್ಥೆಗಳು

Gavisiddeshwara‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ’ ಎಂದು ಬಸವಣ್ಣವರು ಜ್ಞಾನದ ಬೆಳಕಿನಿಂದ ಅಜ್ಞಾನ ಹಾಗೂ ಕತ್ತಲೆ ಹೊರಟು ಹೋಗುತ್ತದೆಂದಿದ್ದಾರೆ. ಕೊಪ್ಪಳ ನಾಡು ವಿಜಯನಗರ ಸಾಮ್ರಾಜ್ಯದ ಅವನತಿ (1565) ಯಿಂದ 1948, ಸಪ್ಟಂಬರ್ 17ರಂದು ಹೈದರಾಬಾದ ವಿಮೋಚನೆ ಪಡೆಯುವವರೆಗೆ 383 ವರ್ಷಗಳ ಕಾಲ ಅನ್ಯಭಾಷೆ ಹಾಗೂ ಅನ್ಯ ಸಂಸ್ಕತಿಗಳಿಂದ ತತ್ತರಿಸಿ ಹೋಗಿತ್ತು. ಕನ್ನಡಕ್ಕೆ ಕುತ್ತೊದಗಿತ್ತು. ಅಭಿವೃದ್ಧಿ ಕಾರ್ಯಗಳನ್ನಂತೂ ಕೇಳುವಂತಿಲ್ಲ. ವಿದ್ಯಾಭ್ಯಾಸಕ್ಕಾಗಿ ಪರದಾಡಬೇಕಿತ್ತು. ಸ್ವಾತಂತ್ರ್ಯ ಬಂತು, ಆದರೆ ಹೈದರಾಬಾದ ಪ್ರಾಂತ್ಯಕ್ಕೆ 17ನೆಯ ಸೆಪ್ಟೆಂಬರ 1948ರ ವರೆಗೆ ಬರಲಿಲ್ಲ 1950 ರಿಂದ ಹೈದರಾಬಾದ ಕರ್ನಾಕದಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳು ಆರಂಭಗೊಂಡವು. ಹೀಗಾಗಿ ಅನ್ನದ ಬರದ ನಾಡಿನಲ್ಲಿ ವಿದ್ಯೆಯ ಬರವು ಹಾಸುಹೊಕ್ಕಾಗಿತ್ತು. ಹುಡುಕಿದರೆ ಊರಿಗೊಬ್ಬ ಇಬ್ಬರೋ ಅಕ್ಷರಬಲ್ಲವರು, ವಿದ್ಯಾವಂತರಿಲ್ಲ, ಇಂಥ ಪರಿಸ್ಥಿತಿಯಿಂದಾಗಿ ಕೊಪ್ಪಳನಾಡು ಅಭಿವೃದ್ಧಿಯಿಂದ ವಂಚಿತವಾಗುತ್ತ ಬಂದಿದೆ. ಈತನಕವೂ ಸಂಪೂರ್ಣವಾಗಿ ಅಭಿವೃದ್ದಿಯನ್ನು ಕಾಣಲಾಗಿಲ್ಲ. ಇದರಿಂದಾಗಿ ಖಾಯಮ್ಮಾಗಿ ಹಿಂದುಳಿದ ಪ್ರದೇಶದಲ್ಲಿ ಪರಿಗಣನೆಗೊಳ್ಳುತ್ತಿದೆ.
1963ರಲ್ಲಿ ಶ್ರೀ ಗವಿಸಿದ್ಧೇಶ್ವರ ಕಾಲೇಜು ಆರಂಭಗೊಳ್ಳುವವರೆಗೆ ಪದವಿದರರನ್ನು ಬೆಳಕು ಹಚ್ಚಿ ಹುಡುಕಬೇಕಾಗಿತ್ತು. 1951ರ ಜುಲೈ 01 ರಿಂದ ಶ್ರೀ ಗವಿಸಿದ್ಧೇಶ್ವರ ಮಿಡ್ಲಸ್ಕೂಲು ಶ್ರೀ ಮ.ನಿ.ಪ್ರ. ಜಗದ್ಗುರು ಲಿಂ. ಮರಿಶಾಂತವೀರ ಮಹಾಸ್ವಾಮಿಗಳವರಿಂದ ಸ್ಥಾಪನೆಗೊಂಡಿತು. ಯಾವ ಅಮೃತಗಳಿಗೆಯಲ್ಲಿ ಈ ಶಾಲೆ ಆರಂಭಗೊಂಡಿತೋ ಏನೋ 1954-55ರಲ್ಲಿ ಮಿಡ್ಲಸ್ಕೂಲು ಹೈಸ್ಕೂಲಾಯಿತು.1957ರಲ್ಲಿ ಎಚ್.ಎಸ್.ಸಿ. ಪ್ರಥಮ ತಂಡ ಹೊರಬಂತು. ಈ ಭಾಗದ ಬಡಜನತೆ ಎಚ್.ಎಸ್.ಸಿ. ವರೆಗೆ ವಿದ್ಯೆ ಪಡೆಯುವಂತಾಯಿತು. ಮುಂದಿನ ಓದಿಗೆ ಕಲಬುರ್ಗಿ ಹೈದರಾಬಾದ ಧಾರವಾಡಗಳಿಗೆ ಹೋಗಬೇಕಾಗಿತ್ತು. ಬಡ ಹಾಗೂ ಮದ್ಯಮ ವರ್ಗದವರಿಗೆಹೆಚ್ಚಿನ ವಿದ್ಯಾಭ್ಯಾಸಕ್ಕೆ ಅನುಕೂಲಕರವಿರಲಿಲ್ಲ. ಶ್ರೀಮಂತರ ಮಕ್ಕಳು ಎಲ್ಲೆಲ್ಲಿಗೋ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಶ್ರೀಮಂತರಿದ್ದರೇನಾಯಿಯಿತು ಓದುವ ಆಸಕ್ತಿ ಬೇಕಲ್ಲ? ಹಲ್ಲದ್ದವರಿಗೆ ಕಡಲೆಯಿಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ. ಗ್ರಾಮಾಂತರ ಹಾಗೂ ಕೊಪ್ಪಳದ ಜನ ಮೆಟ್ರಿಕ್‍ನಂತರ ಓದಿನಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಮಠದ 400 ಎಕರೆ ಜಮೀನು ನೀಡಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್‍ನ್ನು 1963 ರಲ್ಲಿ ಸ್ಥಾಪಿಸಿದರು. ಇಷ್ಟೊತ್ತಿಗೆ ಪೂಜ್ಯ ಶಿವಶಾಂತವೀರ ಮಹಾಸ್ವಾಮಿಗಳವರು ಗವಿಮಠದ ಉತ್ತರಾಧಿಕಾರಿಗಳಾಗಿದ್ದರು. ಇವರನ್ನು ಕರೆದು, ಎಲ್ಲ ಆಸ್ತಿಯನ್ನು ಟ್ರಸ್ಟಿಗೆ ದಾನಮಾಡಲು, ನಿಮ್ಮ ಇಪ್ಪಿಗೆ ಇದೆಯೇ? ಎಂದು ವಿಚಾರಿಸಿದ್ದರು. ಆಗ ಅವರು ಬುದ್ದೀ ತಾವು ನೀಡಿರುವ ಈ ಬೆತ್ತ ಜೋಳಿಗೆ ಹಾಗೂ ತಮ್ಮ ಆಶೀರ್ವಾದವಷ್ಟೇ ಇರಲಿ ಮಠದ ಸರ್ವಸ್ವವನ್ನು ದಾನ ಮಾಡಿರಿ, ನನ್ನ ಅಭ್ಯಂತರವಿಲ್ಲವೆಂದು ವಿನಯದಿಂದ ವಿನಂತಿಸಿಕೊಂಡಿದ್ದರು, ಲಿಂ.ಜ. ಶಿವಶಾಂತವೀರ ಮಹಾಸ್ವಾಮಿಗಳವರು. 1963ರ ಜೂನ ತಿಂಗಳಿನಲ್ಲಿ ಶ್ರೀ ಗವಿಸಿದ್ಧೇಶ್ವರ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯ ಸಂಲಗ್ನದೊಂದಿಗೆ ಆರಂಭಗೊಂಡಿತು. ಮುಂದೆ ಬೇರೆ ಬೇರೆ ಶೈಕ್ಷಣಿಕ ಸಂಸ್ಥೆಗಳು ಆರಂಭಗೊಂಡವು ಅವುಗಳಲ್ಲಿ ಒಂದೊಂದಾಗಿ ನೋಡೋಣ.

ಶ್ರೀ ಗವಿಸಿದ್ಧೇಶ್ವರ ಸಂಯುಕ್ತ ಪ್ರೌಢಶಾಲೆ

ಇದು 1951ರ ಜುಲೈ 01ರಿಂದ ಶ್ರೀ ಬಿ.ಸಿ. ಪಾಟೀಲರ ಮುಖ್ಯಾಧ್ಯಾಪಕತ್ವದಲ್ಲಿ ಆರಂಭಗೊಂಡಿದೆ. ಅದಕ್ಕೀಗ 58 ವರ್ಷಗಳಾಗಿವೆ. ಬಹು ಸುಂದರವಾದ ಕಲ್ಲಿನ ಕಟ್ಟಡವನ್ನು ಹೊಂದಿದ್ದು ಹೈದರಾಬಾದ ಕರ್ನಾಟಕದಲ್ಲಿ ತನ್ನ ಹೆಸರನ್ನು ಪಡೆದುಕೊಂಡಿದೆ. ಅನೇಕ ಗಣ್ಯರನ್ನು ಈ ಶಾಲೆ ನೀಡಿದೆ, ಗಣ್ಯ ಶಿಕ್ಷಕರನ್ನು ಪಡೆದಿದೆ.

ಶ್ರೀ ಗವಿಸಿದ್ಧೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ,

1963ರಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಮೂಲಕ ಆರಂಭಗೊಂಡಿತು. ಪಿ.ಎಮ್. ಉಮಾಕಾಂತ ಶಾಸ್ತ್ರಿ ಎಂಬುವರು ಇದರ ಪ್ರಾರಂಭದ ಪ್ರಿನ್ಸಿಪಾಲರಾಗಿದ್ದರು. ಶೈಕ್ಷಣಿಕವಗಿ, ಕ್ರೀಡೆಯಲ್ಲಿ ಗುಲಬುರ್ಗಾ ವಿಶ್ವವಿದ್ಯಾಲಯದಲ್ಲಿ ಹೆಸರುವಾಸಿಯಾದ ಮಹಾವಿದ್ಯಾಲಯವಾಗಿದೆ.
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜನ್ನು 2004ರ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜಿನಿಂದ ವಿಭಜಿಸಿ ಸ್ವತಂತ್ರ ಕಾಲೇಜಾಗಿ ನಡೆಯುತ್ತಲಿದೆ.

ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ, ಮಿಟ್ಟಿಕೇರಿ, ಕೊಪ್ಪಳ

1951ರ ಜುಲೈ 01ರಿಂದ ಶ್ರೀ ಗವಿಸಿದ್ಧೇಶ್ವರ ಮಿಡ್ಲಸ್ಕೂಲು ಆರಂಭಗೊಂಡಾಗಿನಿಂದ ಇದು ಆರಂಭಗೊಂಡಿದೆ. ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಲ್ಲಿ ಇದು ಮೊದಲು ಆರಂಭಗೊಂಡಿತು.

ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ ಕುಂಬಾರ ಓಣಿ ಕೊಪ್ಪಳ

ಇದು ಆರಂಭಗೊಳ್ಳಲು ಒಂದು ಕಾರಣವಿದೆ. ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿತ್ತು. 1960ರಲ್ಲಿ ದೇವಸ್ಥಾನದ ಕಟ್ಟಡ ಆರಂಭಗೊಂಡಿದ್ದರಿಂದ ಪ್ಯಾಟಿ ಈಶ್ವರ ದೇವಸ್ಥಾನಕ್ಕೆ ಈ ಶಾಲೆ ಬಂದಿತು. ಕಟ್ಟಡ ಪೂರ್ಣಗೊಂಡಮೇಲೆ ಶ್ರೀ ಮಹೇಶ್ವರ ದೇವಸ್ಥಾನದ ಹಿಂದಿನ ಭಾಗದಲ್ಲಿ ಶಾಲೆ ನಡೆಯಹತ್ತಿತ್ತು. ಆದರೆ ಪ್ಯಾಟಿ ಈಶ್ವರ ದೇವಸ್ಥಾನ ಸಮಿತಿಯವರು ತಮ್ಮ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೊಸ ನಿವೇಶನದ ವ್ಯವಸ್ಥೆ ಮಾಡಿ ಕೊಟ್ಟಿದ್ದರಿಂದ ಕುಂಬಾರ ಓಣಿ ಶಾಲೆ 1961ರಿಂದ ನಡೆಯುತ್ತಲಿದೆ.

ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ, ಕುಕನೂರು:

ಇದು 1955ರಲ್ಲಿಯೇ ಸ್ಥಳೀಯ ಶಿಕ್ಷಣ ಪ್ರೇಮಿಗಳಿಂದ ಕುಕನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಮುಟಿಗಿ ಸಂಗಪ್ಪನವರು, ವೈದ್ಯ ಮಡಿವಾಳಯ್ಯ ಕಂಬಾಳಿಮಠ ಹಾಗೂ ಶ್ರೀ ಸೋಮಶೇಖರ ಪೂಜಾರ ಶಿಕ್ಷಕರ ಪ್ರಯತ್ನದಿಂದ ಆರಂಭಗೊಂಡಿತು. ಇದರ ಆರಂಭಿಕ ಹೆಡ್‍ಮಾಸ್ಟರಾಗಿದ್ದವರು. ಡಿಪಿಐರೆಂದು ನಿವೃತ್ತರಾದ ಕೆ. ಶಾಂತಯ್ಯನವರು. ಅವರು ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ (ನ್ಯೂಟೈಪ್ ಮಿಡ್ಲ ಸ್ಕೂಲ್) ಪದವಿದರ ಮುಖ್ಯಾಧ್ಯಾಪಕರಾಗಿದ್ದರು. ಜೊತೆಗೆ ಇದರ ಮುಖ್ಯಾಧ್ಯಾಪಕರು ಕೂಡಾ ಆಗಿದ್ದರೆಂಬುದು ನಿಜವಾದ ಸಂಗತಿ 1962ರಲ್ಲಿ ಸ್ಥಳೀಕರು ಲಿಂ.ಜ. ಮರಿಶಾಂತವೀರ ಮಹಾಸ್ವಾಮಿಗಳವರಲ್ಲಿಗೆ ಆಗಮಿಸಿ, “ಮುಂಡರಗಿ ಸಂಸ್ಥಾನ ಮಠದ ಜ. ಅನ್ನದಾನೀಶ್ವರ ಮಹಾಸ್ವಾಮಿಗಳವರು ಪ್ರಸಾದ ನಿಲಯವನ್ನು ತಮ್ಮ ಮಠದಲ್ಲಿ ನಡೆಸುತ್ತಿದ್ದಾರೆ. ನಿವು ಹೈಸ್ಕೂಲು ತೆಗೆದುಕೊಂಡು ಜ್ಞಾನ ದಾಸೋಹ ಮಾಡಬೇಕೆಂದು” ಪ್ರಾರ್ಥಿಸಿಕೊಂಡರು. 1962-63ರ ಶೈಕ್ಷಣಿಕ ವರ್ಷದಿಂದ ಈ ಸಂಸ್ಥೆಯಿಂದ ಇದು ನಡೆಯಲು ಆರಂಭಿಸಿತು.

ಶ್ರೀ ಗವಿಸಿದ್ಧೇಶ್ವರ ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆ

1978 ರಿಂದ ಕಾನ್ವೆಂಟ್ ಮಾದರಿಯಲ್ಲಿ ಇದು ಕುಕನೂರಿನಲ್ಲಿ ಆರಂಭಗೊಂಡಿತು.

ಶ್ರೀ ಗವಿಸಿದ್ಧೇಶ್ವರ ಅಂಗನವಾಡಿ ತರಬೇತಿ ಕೇಂದ್ರ :

ಇದು 1978 ರಲ್ಲಿ ಯಲಬುರ್ಗಾ ತಾಲೂಕಿನಲ್ಲಿ ಅಂಗನವಾಡಿ ಯೋಜನೆ ಬಂದಾಗ ಅದಕ್ಕೆ ಬೇಕಾದ ಶಿಕ್ಷಕಿಯರ ತರಬೇತಿಗಳಿಗೆ ಈ ಕೇಂದ್ರ ಕುಕನೂರಿನಲ್ಲಿ ಸ್ಥಾಪಿತಗೊಂಡಿತು.

ಶ್ರೀ ಗವಿಸಿದ್ದೇಶ್ವರ ಬಿ.ಎಡ್ ಕಾಲೇಜು ಕೊಪ್ಪಳ :

ಎಲ್ಲಾ ಕಡೆಗೆ ಬಿ.ಎಡ್ ಕಾಲೇಜುಗಳು ಆರಂಭಗೊಂಡಿದ್ದವು. ಹಿಂದಿ ಬಿ.ಎಡ್ ಬಿಟ್ಟರೆ ಈ ಭಾಗದಲ್ಲಿ ಇಂತಹ ಶಿಕ್ಷಣ ತರಬೇತಿ ಕಾಲೇಜುಗಳಿಲಿಲ್ಲವಾದ್ದರಿಂದ 2004 ರಿಂದ ಆರಂಭಗೊಂಡಿದೆ.

ಶ್ರೀ ಗವಿಸಿದ್ಧೇಶ್ವರ ಡಿ.ಎಡ್ ಕಾಲೇಜು ಕೊಪ್ಪಳ :

ಕೊಪ್ಪಳದಲ್ಲಿ ಸರ್ಕಾರಿ ಟಿ.ಸಿ.ಹೆಚ್. ಕಾಲೇಜು 1959 ರಿಂದ ಆರಂಭಗೊಂಡಿತ್ತು. ಮತ್ತೆ ಬೇರೆ ಕಾಲೇಜುಗಳಾಗಲಿಲ್ಲ. ಆದ್ದರಿಂದ 2004 ರಿಂದ ಈ ಕಾಲೇಜನ್ನು ಆರಂಭಿಸಲಾಯಿತು. Gavisiddeshwara

ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ :

1996 ರಲ್ಲಿ ಶ್ರೀ ಮ.ನಿ.ಪ್ರ ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳವರ ಷಷ್ಟ್ಯಬ್ದಪೂರ್ತಿ ಸಮಾರಂಭವನ್ನು ನಡೆಸಲು ಭಕ್ತರು ಹಾಗೂ ಶ್ರೀ ಗವಿಸಿದ್ಧೇಶ್ವರ ಕೃಪಾಪೋಷಿತ ವಿದ್ಯಾರ್ಥಿ ಬಳಗದವರು ಕೇಳಿಕೊಂಡಾಗ ಕೊಪ್ಪಳ ಗವಿಮಠವು ಆಯುರ್ವೇದ ಚಿಕಿತ್ಸೆಗೆ ಪ್ರಸಿದ್ಧವಾಗಿದೆ. ಗವಿಸಿದ್ಧೇಶ್ವರ ಶಿವಯೋಗಿ ಹೈದರಾಬಾದಿನ ಮೀರಾಲಂ ಬಹಾದ್ದೂರನ ಕುಷ್ಠರೋಗ ಕಳೆದಿದ್ದರಿಂದ 1801ರಲ್ಲಿ ಹಿರೇಬಗನಾಳ ಜಹಾಗೀರ ಗ್ರಾಮವಾಗಿ ಬಂದಿದೆ. ನಮ್ಮ ಗುರುಗಳಾದ ಲಿಂ.ಜ. ಮರಿಶಾಂತವೀರ ಮಹಾಸ್ವಾಮಿಗಳವರು ಆಯುರ್ವೇದ ಹಾಗೂ ಯೋಗಶಾಸ್ತ್ರದಲ್ಲಿ ಬಲ್ಲಿದವರಾಗಿದ್ದರು. ನಾವು ಕೂಡ ಅವರ ಗರಡಿಯಲ್ಲಿಯೇ ತರಬೇತಾದವರಾದ್ದರಿಂದ ನಮಗೂ ಆಯುರ್ವೇದ ಚಿಕಿತ್ಸೆಯಲ್ಲಿ ತುಂಬ ಆಸಕ್ತಿಯಿದೆ. ಅಲೋಪೆಥಿ ಚಿಕಿತ್ಸೆಯಿಂದ ಅಡ್ಡ ಪರಿಣಾಮಗಳಾಗುತ್ತಿದ್ದು, ರೋಗ ಸಂಪೂರ್ಣ ಗುಣಮುಖವಾಗುವುದಿಲ್ಲವಾದ್ದರಿಂದ ಆಯುರ್ವೇದ ಚಿಕಿತ್ಸೆಗಾಗಿ ಆಯುರ್ವೇದ ಆಸ್ಪತ್ರೆಯಾಗುವುದಾದರೆ ನಾವು ಒಪ್ಪುತ್ತೇವೆ ಎಂದು ಅಪ್ಪಣೆ ಮಾಡಿದ್ದರಿಂದ ಅವರ ಷಷ್ಟ್ಯಬ್ದಪೂರ್ತಿ ಸಮಾರಂಭದ ವರ್ಷದಿಂದಲೇ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದರು. ಮೊದಲು ಆಯುರ್ವೇದ ಆಸ್ಪತ್ರೆ 1995 ರಲ್ಲಿ ಆರಂಭಗೊಂಡಿತು. ಇದು ಕರ್ನಾಟಕದ ಪ್ರಸಿದ್ಧ ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲೊಂದಾಗಿದೆ.

ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು:

1998ರಲ್ಲಿ ಈ ಕಾಲೇಜು ಆರಂಭಗೊಂಡಿದೆ. ಸುಂದರವಾದ ಸುಸಜ್ಜಿತವಾದ ಕಟ್ಟಡವಾಗಿದೆ. ಒಳ್ಳೊಳ್ಳೆಯ ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಪಾಠಭೋದನೆ ಪ್ರಾಯೋಗಿಕ ತರಬೇತಿ ಆಯುರ್ವೇದೀಯ ಗಿಡಮೂಲಿಕೆಗಳ ಉದ್ಯಾನ ಹೊಂದಿ ಉತ್ತಮ ಆಯುರ್ವೇದ ಕಾಲೇಜುಗಳಲ್ಲೊಂದಾಗಿದೆ.

ಶ್ರೀಮತಿ ಶಾರದಮ್ಮ ಕೊತಬಾಳ ಬಿ.ಬಿಎಮ್. ಹಾಗೂ ಬಿ.ಸಿ.ಎ ಕಾಲೇಜು ಕೊಪ್ಪಳ,

ಆಧುನಿಕ ಶಿಕ್ಷಣದ ಬೇಡಿಕೆಗೆ ಅನುಗುಣವಾಗಿ 2007ರಲ್ಲಿ ಈ ಕಾಲೇಜು ಆರಂಭಗೊಂಡಿದೆ.

ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲು ಕೊಪ್ಪಳ

2005ರಲ್ಲಿ ಸಿಬಿಎಸ್‍ಸಿ ಸಿಲೆಬಸ್ಸಿನ ಶಿಕ್ಷಣ ಸಂಸ್ಥೆಗಳು ಇಲ್ಲದ್ದರಿಂದ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೂಲು ಆರಂಬಿಸಲಾಗಿದೆ.ಇದಕ್ಕಾಗಿ ಊರ ಹೊರ ವಲಯದಲ್ಲಿ ಸುಸಜ್ಜಿತ ಕಟ್ಟಡ, ಉದ್ಯಾನ ನಿರ್ಮಾಣಗೊಳ್ಳುತ್ತಲಿದ್ದು ಅದು ಪೂರ್ಣಗೊಂಡಾಗ ಅಲ್ಲಿಗೆ ಸ್ಥಳಾಂತರಗೊಂಡು ಆಸಕ್ತಿಯ ಕೇಂದ್ರವಾಗಲಿದೆ.

ಶ್ರೀ ಗವಿಸಿದ್ಧೇಶ್ವರ ಸಂಗೀತ ಪಾಠಶಾಲೆ ಮತ್ತು ವಿದ್ಯಾಪೀಠ ಕೊಪ್ಪಳ

1958 ರಿಂದ ಆರಂಭಗೊಂಡಿದೆ ಇಲ್ಲಿ ಸಂಗೀತ ಪರೀಕ್ಷೆಗಳಿಗಾಗಿ ತರಬೇತುಗೊಳಿಸಲಾಗುತ್ತ್ತಿದೆ. ಹಿಂದಿನ ಎಲ್ಲ ಶ್ರೀಗಳವರು ಸಂಗೀತ ಪ್ರೀಯರಾಗಿದ್ದವರು, ಕೆಲವು ಸಂಗಿತಗಾರರಂತೂ ಈ ಮಠದ ಆಸ್ಥಾನ ಸಂಗೀತ ವಿದ್ವಾನರಂತಿದ್ದರು. ಈ ಕೀರ್ತಿಯನ್ನು ಉಳಿಸಿಕೊಂಡು ಬೆಳಸಿಕೊಂಡು ಬರುವಂಥ ಸಂಸ್ಥೆ ಇದಾಗಿದೆ.

ಶ್ರೀ ಗವಿದ್ಧೇಶ್ವರ ವೈದಿಕ ಮತ್ತು ಜ್ಯೋತಿಷ್ಯ ಪಾಠಶಾಲೆ, ಕೊಪ್ಪಳ:

ಇದು 2004ರಲ್ಲಿ ಆರಂಭಗೊಂಡಿದ್ದು ಜಂಗಮರ ಹುಡುಗರು ಈ ವಿದ್ಯೆಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಸಂಸ್ಕತ ಪಾಠಶಾಲೆ ಗವಿಮಠದಲ್ಲಿ ಗಡ್ಡದಜ್ಜಾ ಅವರ ಕಾಲದಲ್ಲಿತ್ತು. ಬಳ್ಳಾರಿ ಪಂ.ವೈ. ನಾಗೇಶ ಶಾಸ್ತ್ರೀಗಳವರು ಪಂ. ಕೊಂಗವಾಡ ವೀರಭದ್ರ ಶಾಸ್ತ್ರೀಗಳು ಹಿರೇಮಠ ಅವರಿಂದ ವಿದ್ಯಾದಾನ ಪಡೆದರು. ಹಲವಾರು ಸ್ವಾಮಿಗಳು, ಪಟ್ಟದ್ದೇವರು ಈ ಸಂಸ್ಕøತ ಪಾಠಶಾಲೆಯಲ್ಲಿ ಓದಿದವರಾಗಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಇನ್‍ಸ್ಟಿಟ್ಯೂಟ್ ಆಪ್ ವೊಕೇಷನಲ್ ಎಕ್ಷಲೆನ್ಸಿ, ಕೊಪ್ಪಳ

ಆಧುನಿಕ ತಂತ್ರಜ್ಞಾನ ಹಾಗೂ ವಿದ್ಯುನ್ಮಾನ ಯುಗದಲ್ಲಿ ತಮ್ಮ ತಮ್ಮ ವೃತ್ತಿಯಲ್ಲಿ ಶ್ರೇಷ್ಟತೆ ಪ್ರಾವಿಣ್ಯತೆ ಪಡೆಯಲು ಇಲ್ಲಿ ತರಬೇತಿ ನೀಡುತ್ತಾರೆ. ಕ್ಯಾಂಪಸ್ ಸಿಲೆಕ್ಷನ್ನಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ತರಬೇತಿ ಸಹಾಯಕಕಾರಿಯಾಗಿ ಪರಣಮಿಸಿದೆ.

ಶ್ರೀ ಗವಿಸಿದ್ಧೇಶ್ವರ 2000 ವಿದ್ಯಾರ್ಥಿಗಳ ಉಚಿತ ವಿದ್ಯಾರ್ಥಿ ಪ್ರಸಾದನಿಲಯ ಕೊಪ್ಪಳ:

18ನೆಯ ಪೀಠಾಧಿಪತಿಗಳಾದ ಜಗದ್ಗುರು ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು 2002ರಲ್ಲಿ ಅಧಿಕಾರಕ್ಕೆ ಬಂದನಿಂದ ನಾಡಿನ ಹಿರಿಯ ಶಿಕ್ಷಣ ಸಂಸ್ಥೆಗಳನ್ನು ಪೂಜ್ಯ ಸ್ವಾಮಿಗಳವರನ್ನು ಸಂದರ್ಶಿಸಿ ಒಳ್ಳೆಯದನ್ನು ಕೊಪ್ಪಳಕ್ಕೆ ತರಬೇಕೆಂಬ ಧೃಡ ಸಂಕಲ್ಪ ಮಾಡಿದ್ದರ ಫಲವಾಗಿ ಈ 3-4 ವರ್ಷಗಳಲ್ಲಿ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯ ತಲೆಯೆತ್ತುತ್ತಲಿದೆ. ಕನಾಟಕ ರತ್ನ ಶ್ರೀ ಮ.ನಿ.ಪ್ರ.ಸ್ವ. ಡಾ. ಶಿವಕುಮಾರ ಮಹಾಸ್ವಾಮಿಗಳವರು ಸಿದ್ದಗಂಗಾಮಠ ಇವರ ಅಮೃತ ಹಸ್ತದಿಂದ ಶಂಖು ಸ್ಥಾಪನೆ ನೆರವೇರಿಸಿ ಮರುವರ್ಷವೇ ಕಟ್ಟಡದ ಮೊದಲ ಹಂತದ ಪ್ರವೇಶವನ್ನು ಅವರಿಂದ ನೆರವೇರಿಸಿ ಅದರ ಮರುವರ್ಷವೇ ಮತ್ತೊಂದು ಮಹಡಿಯ ಉದ್ಘಾಟನೆ ಮಾಡಿಸಿದರು. ಇದರಿಂದಾಗಿ ಮಹತ್ವಾಕಾಂಕ್ಷಿಯ ಯೋಜನೆಯೊಂದು ಕೊಪ್ಪಳ ನಾಡಿನಲ್ಲಿ ರೂಪಗೊಳ್ಳುತ್ತಲಿದೆ.

ಶ್ರೀ ಗವಿಸಿದ್ಧೇಶ್ವರ ಉಚಿತ ವಸತಿ ನಿಲಯ ಮತ್ತು ಪ್ರಸಾದ ನಿಲಯ, ಗಜೇಂದ್ರಗಡ ಜಿ. ಗದಗ:

ಗಜೇಂದ್ರಗಡ ಹೊಸ ಗದಗ ಜಿಲ್ಲೆಯ ವ್ಯಾಪಾರಿ ಹಾಗೂ ವಿದ್ಯಾ ಕೇಂದ್ರವಾಗಿದೆ. ಶ್ರೀ ಗವಿಸಿದ್ಧೇಶ್ವರ ಶಿವಯೋಗಿಗಳು ಗಜೇಂದ್ರಗಡದ ಘೋರ್ಪಡೆ ದೊರೆಗಳ ಕುಮಾರಿಗೆ ಬ್ರಹ್ಮ ಪಿಶಾಚಿ ಬಡೆದುಕೊಂಡಿದ್ದನ್ನು ನವಾರಿಸಿ ಉದ್ಧಾರ ಮಾಡಿದ್ದರಿಂದ ಭಕ್ತಿಭಾವದಿಂದ ಜಾಗೆಯನ್ನು ನೀಡಿ ಗವಿಮಠವನ್ನು ಕಟ್ಟಿಸಿ ಕೊಟ್ಟಿದ್ದರು. ಅದು ಇತ್ತೀಚೆಗೆ ಶಿಥಿಲಗೊಂಡಿದ್ದರಿಂದ ಅದನ್ನು ಲಿಂ.ಜ. ಶಿವಶಾಂತವೀರ ಮಹಾಸ್ವಾಮಿಗಳವರು ಹೊಸದಾಗಿ ಕಟ್ಟಿಸಿ ಅಲ್ಲಿ ಉಚಿತ ಪ್ರಸಾದ ನಿಲಯ ನಡೆಯುವ ವ್ಯವಸ್ಥೆ ಮಾಡಿದ್ದಾರೆ. ಹಿಂದಿ ಹಾಗೂ ಸಂಸ್ಕøತ ಪಾಠಶಾಲೆ ನಡೆಯುತ್ತವೆ.

ಶ್ರೀ ಗವಿಸಿದ್ಧೇಶ್ವರ ಗೋಶಾಲೆ ಗುಂಡ ತಾ. ಸಿಂಧನೂರು

ಗೋವು ಸಂಪತ್ತು ಒಂದು ದೊಡ್ಡ ಸಂಪತ್ತು. ಇತ್ತೀಚಿನ ಸುಭಾಸ್ ಪಾಳೇಕರ ಸಹಜ ಕೃಷಿಯಲ್ಲಿ ಗೋಮುತ್ರ ಹಾಗೂ ಗೋಸೆಗಣಿಯ ಮಹತ್ವ ಹೆಚ್ಚಾಗಿವೆ. ಇದನ್ನು ಮನಗಂಡು ಸಿಂಧನೂರು ತಾಲೂಕಿನ ಗುಂಡದಲ್ಲಿ ಗೋಶಾಲೆಯನ್ನು 2006ರಲ್ಲಿ ಆರಂಭಿಸಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಭಸ್ಮಶುದ್ಧೀಕರಣ ಘಟಕ ಸಂಕನಾಳ ತಾ. ಸಿಂಧನೂರು:

ಗೋವುಗಳ ಸಗಣಿಯನ್ನು ಗೊಬ್ಬರವಾಗಿ ಉಪಯೋಗಿಸುತ್ತಿದ್ದು ಮಿಕ್ಕ ಸಗಣಿಯಿಂದ ವಿಭೂತಿಯನ್ನು ತಯಾರಿಸಲಾಗುತ್ತಿದೆ. ಶುದ್ಧ ಭಸ್ಮ ಶಿವಯೋಗ ಮಂದಿರದಲ್ಲಿ ದೊರಕುತ್ತಿದ್ದವು. ಇನ್ನೊಂದು ಅಂಥ ಶುದ್ಧ ಭಸ್ಮ ತಯಾರಿಸುವ ಕೇಂದ್ರವನ್ನು ನೂತನ ಶ್ರೀಗಳವರು 2006ರಲ್ಲಿ ಆರಂಭಿಸಿದ್ದಾರೆ.

ಸಂಸ್ಥಾನ ಶ್ರೀ ಗವಿಮಠದ ಪೇಸ ಬುಕ್ ಪುಟವನ್ನು ಲೈಕ್ ಮಾಡಿ

ಶ್ರೀ ಗವಿಮಠ ಪರಂಪರೆ

ಶ್ರೀ ಗವಿಸಿದ್ಧೇಶ್ವರ ಶಿವಯೋಗಿಗಳಿಂದಾಗಿ ಕೊಪ್ಪಳ ಪ್ರಸಿದ್ಧಿ ಪಡೆದಿದೆ. ಕೊಪ್ಪಳ ನಾಡಿನ ಆಧಿದೇವ ಗವಿಸಿದ್ಧೇಶ್ವರನಾಗಿದ್ದಾನೆ.ಕೊಪ್ಪಳ ಹಾಗೂ ಕೊಪ್ಪಳ ನಾಡಿನ ಅಧಿದೈವತನಾದ ಗವಿಸಿದ್ಧೇಶ್ವರಸ್ವಾಮಿ ಶ್ರೀ ಗವಿಮಠ ಮೂಲ ಕರ್ತೃವೇ ಇದ್ದಿರಬೇಕೆಂಬ ಭಾವನೆಯಿದೆ. ಆದರೆ ಹೀಗಿರದೆ, ಶ್ರೀ ಗವಿಮಠದ ಭವ್ಯ ಪರಂಪರೆಯಲ್ಲಿ ಹನ್ನೊಂದನೆಯ ಶಿವಯೋಗಿಗಳಾಗಿದ್ದಾರೆ; ಮಹಾ ಮಹಿಮ ಪುರುಷರಾಗಿದ್ದಾರೆ. ಅನೇಕ ಉದ್ಧಾರದ ಕಾರ್ಯಗಳನ್ನು ಮಾಡಿದ್ದಾರೆ. ಅವರು ಗೈದ ಕಾರ್ಯಗಳು ಪವಾಡ ಸದೃಶವಾಗಿದೆ. ಇದರಿಂದಾಗಿ ತಮಗಿಂತ ಹಿಂದಿನವರನ್ನು ಮರೆಯಿಸಿ ಬಿಟ್ಟಿದ್ದಾರೆ. ಮುಂದಿನವರಿಗೆ ಭಕ್ತರ ಹೃನ್ಮಂದಿರದಲ್ಲಿ ಶಾಶ್ವತವಾದ ಸ್ಥಾನವನ್ನು ತೆರೆದಿಸಿದ್ದಾರೆ. ಗವಿಸಿದ್ಧೇಶ್ವರರಿಂದ ಶ್ರೀ ಗವಿಮಠವೆಂಬ ಅನ್ವರ್ಥಕ ಹೆಸರಾಯಿತು.

ಗವಿಮಠದ ಗುರುಪರಂಪರೆಯ ಸಂಪೂರ್ಣ ಮಾಹಿತಿ

Gavisiddeshwara

1.ಶ್ರೀ ರುದ್ರಮುನಿ ಶಿವಯೋಗಿಗಳು:

ಉತ್ತರ ಭಾರತದ ಕಾಶೀ ಕ್ಷೇತ್ರದಲ್ಲಿಯ ಜಂಗಮವಾಡಿ ಮಠದಿಂದ ಶ್ರೀ ರುದ್ರಮುನಿ ಶಿವಯೋಗಿಗಳು ಧರ್ಮ ಪ್ರಚಾರಾರ್ಥವಾಗಿ ದಕ್ಷಿಣಕ್ಕೆ ದಯಮಾಡಿಸಿ ರಾಮೇಶ್ವರ ತಲುಪಿ ಕರ್ನಾಟಕ ಹಂಪೆಗೆ ಬಂದು ಉದ್ದಾನ ವೀರಭದ್ರೇಶ್ವರ ಗುಡಿ ಹತ್ತಿರದ ಪರ್ಣ ಕುಟೀರದಲ್ಲಿ ಕೆಲ ದಿವಸ ತಪಸ್ಸುಗೈದು, ಕಮಲಾಪುರ (ಕಮಲಾಪುರದಲ್ಲಿದ್ದ ಗವಿಮಠವನ್ನು ಪ್ರೌಢ ದೇವರಾಯನ ಕಾಲದಲ್ಲಿ ಜೀರ್ಣೊದ್ಧಾರ ಮಾಡಿಸಲಾಗಿದೆ). ಮಾರ್ಗವಾಗಿ ಬಂದು ಕೊಪ್ಪಳ ಗುಡ್ಡದ ಗವಿಯಲ್ಲಿ ನೆಲೆ ನಿಂತು ಬೆಟ್ಟದ ಗವಿಯೇ ಗವಿಮಠವಾಯಿತು. ಈ ಮಠವು ಅಂತೆಯೇ ಕಾಶೀ ಚರವರ್ಯ ಮಠವೆಂದು ಪ್ರಸಿದ್ಧಿ ಪಡೆದಿದೆ. ಶ್ರೀ ರುದ್ರಮುನಿ ಶಿವಯೋಗಿಗಳಿಂದ ಕೊಪ್ಪಳ ಶ್ರೀ ಗವಿಮಠದ ಭವ್ಯ ಪರಂಪರೆ ಪ್ರಾರಂಭಗೊಂಡಿದೆ. ಇವರ ತಪಸ್ಸಿನ ಪ್ರಭಾವವು ನಾಡಿನಲ್ಲಿ ಹರಡಲು ಮಸ್ಕಿಯ ಶರಣ ಹೋಳಿ ಹಂಪಯ್ಯನು ವ್ಯಾಪಾರಮಾಡುತ್ತ ಶ್ರೀ ರುದ್ರಮುನಿ ಶಿವಯೋಗಿಗಳ ದರ್ಶನ, ಪಾದೋದಕ ಪ್ರಸಾದಗಳನ್ನು ಪಡೆದು ಪುನೀತನಾಗಿ ವ್ಯಾಪಾರದಲ್ಲಿ ಲಾಭ ಹೊಂದಲು ಗುಹೆ ಮುಂದಿನ ಭಾಗವನ್ನು ಕಟ್ಟಿಸಿದನು. ಸಮೀಪದ ಹಿರೇಹಳ್ಳದ ದಂಡೆಯ ಮೇಲಿರುವ ನರೇಗಲ್ಲ ಗ್ರಾಮಕ್ಕೆ ಮೇಲಿಂದ ಮೇಲೆ ಶ್ರೀಗಳವರು ದಯಮಾಡಿಸುತ್ತಲಿದ್ದರು. ಒಂದೊಂದು ಸಲ ಹಿರೇಹಳ್ಳದ ದಂಡೆಯ ನಿಸರ್ಗ ರಮಣೀಯ ನೆಲೆಯಲ್ಲಿ ಕುಳಿತು ಲಿಂಗಾನಂದದಲ್ಲಿ ಮೈಮರೆಯುತ್ತಿದ್ದರು. ನರೇಗಲ್ಲಿನಲ್ಲಿಯೇ ಲಿಂಗದೊಳಗಾದರು. ಮೂಲಕರ್ತೃ ಗದ್ದುಗೆ ನರೇಗಲ್ಲಿನಲ್ಲಿದ್ದು ಪೂಜೆಗೊಳ್ಳುತ್ತಿದೆಯಲ್ಲದೆ, ಪ್ರತಿವರ್ಷ ಜಾತ್ರೆಯೂ ಜರುಗುತ್ತದೆ.

2.ಶ್ರೀ ಸಂಗನಬಸವ ಶಿವಯೋಗಿಗಳು:

ಶ್ರೀ ಗವಿಮಠ ಪರಂಪರೆಯ ಎರಡನೆಯ ಪೀಠಾಧಿಪತಿಗಳಾದವರು, ಇದೇ ನರೇಗಲ್ಲ ಹಿರೇಮಠದ ಶ್ರೀ ಸಂಗನಬಸವ ಚರಮೂರ್ತಿಗಳವರು. ಇವರು ಬಳ್ಳಾರಿ ಜಿಲ್ಲೆಯಲ್ಲಿ ಸಂಚರಿಸುತ್ತ ಈಗ ದಾವಣಗೇರಿ ಜಿಲ್ಲೆಯ ಹರಪ್ಪನಹಳ್ಳಿಗೆ ದಯಮಾಡಿಸಿದರು. ಅಲ್ಲಿಯ ಗುರುಸಿದ್ಧಶೆಟ್ಟಿ, ಓಂಕಾರಶೆಟ್ಟಿ ಮುಂತಾದ ಭಕ್ತರ ಸೇವೆಗೆ ಒಲಿದು ಗವಿಮಠದ ಶಾಖಾಮಠವೊಂದನ್ನು ಕಟ್ಟಿಸಿದರು. ಜ.ಸಂಗನಬಸವ ಶಿವಯೋಗಿಗಳವರು ಹರಪ್ಪನಹಳ್ಳಿಯಲ್ಲಿಯೇ ಲಿಂಗೈಕೈರಾಗಲು ಅಲ್ಲಿಯ ಹೂವಿನ ಹಡಗಲಿ ರಸ್ತೆಯಲ್ಲಿರುವ ಗವಿಮಠದಲ್ಲಿ ಸಮಾಧಿ ಮಾಡಲಾಯಿತು. ಇಂದಿಗೂ ಅವರ ಗದ್ದುಗೆ ಹರಪ್ಪನಹಳ್ಳಿಯಲ್ಲಿ ಪೂಜೆಗೊಳ್ಳುತ್ತಲಿದೆ.

3.ಜ. ಶಿವಲಿಂಗ ಶಿವಯೋಗಿಗಳು:.

ಇವರು ಹರಪ್ಪನಹಳ್ಳಿಯ ಚರಮೂರ್ತಿಗಳವರು. ಜ.ಸಂಗನಬಸವ ಶಿವಯೋಗಿಗಳವರು ಹರಪ್ಪನಹಳ್ಳಿಗೆ ಬಂದಾಗ ವಿದ್ಯೆಯಲ್ಲಿ ಷಣ್ಮಖ, ಭಕ್ತಿಯಲ್ಲಿ ಬಸವರಸ ಹಾಗೂ ಶಿವಯೋಗ ಸಿದ್ಧಿಯಲ್ಲಿ ಅಲ್ಲಮಪ್ರಭುವೇ ಆಗಿದ್ದ ಶಿವಲಿಂಗ ಚರಮೂರ್ತಿಗಳನ್ನು ತಮ್ಮ ಮುಂದಿನ ಪೀಠಾಧಿಪತಿಗಳೆಂದು ಆಯ್ಕೆ ಮಾಡಿಕೊಂಡು ಪಟ್ಟಾಧಿಕಾರ ನೀಡಿದರು. ಇವರು ಗವಿಮಠದೊಡೆಯರಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಲಿದ್ದರು. ಒಮ್ಮೆ ಸಮೀಪದ ಹಳ್ಳಿಯ ಮುಗ್ದ ಕೊಪ್ಪಳ ಶ್ರೀ ಗವಿಮಠಕ್ಕೆ ಮಕ್ಕಳನ್ನು ಬಯಸಿ ಬಂದರು ಆ ಹೆಣ್ಣು ಮಗಳು ನೀರು ತುಂಬಲು ಹೋಗಿ, ಮಠದ ನೀರಿನ ಡೋಣಿಯಲ್ಲಿ ಬಿದ್ದು ಪ್ರಾಣ ನೀಗಿದಳು ಈ ವಿಷಯವನ್ನರಿತ ಶ್ರೀಗಳವರು, ‘ಮಗನನ್ನು ಪಡೆಯಲು, ಬಯಸಿ ಬಂದು ಈ ಪವಿತ್ರಸ್ಥಾನದಲ್ಲಿ ದೇಹ ಬಿಡುವುದನುಚಿತವು ಮೇಲೇಳೆಂದು’ ಆಶೀರ್ವದಿಸಿ, ಪ್ರಾಣ ದಾನಗೈದು ಸಂತಾನ ಕರುಣಿಸಿದರು. ಇವರ ಗದ್ದುಗೆಯು ಕೂಡ ಹರಪ್ಪನಹಳ್ಳಿಯ ಗವಿಮಠದಲ್ಲಾಗಿದೆ. ತಮ್ಮ ಗುರುಗಳ ಗದ್ದುಗೆಯೊಂದಿಗೆ ಇಂದಿಗೂ ಪೂಜೆಗೊಳ್ಳುತ್ತಲಿದೆ. .

4. ಜ. ಚೆನ್ನವೀರ ಶಿವಯೋಗಿಗಳು:.

ಇವರ ಗುರುಗಳಾದ ಜ. ಶಿವಲಿಂಗ ಶಿವಯೋಗಿಗಳವರು ಗದಗ ಜಿಲ್ಲೆಯ ಶಾಂತಗಿರಿಗೆ ದಯಮಾಡಿಸಿದಾಗ ಅಲ್ಲಿಯ ಹಿರೇಮಠದ ಹಿರೇಮಠದ ವಿರುಪಾಕ್ಷಯ್ಯನವರ ಮಕ್ಕಳಾದ ಶ್ರೀ ಚನ್ನವೀರ ಸ್ವಾಮಿಗಳವರನ್ನು ತಮ್ಮ ಮರಿಯನ್ನಾಗಿ ಸ್ವೀಕರಸಿ, ಪಟ್ಟಾಭಿಷೇಕವನ್ನು ನೆರವೇರಿಸಿದರು. ಇವರು ಶರಣರಧರ್ಮದ ಪರಮಸಾರವಾದ ದಾಸೋಹವನ್ನು ಎಡೆಬಿಡದೆ ನಡೆಸಿದರು. ನಾಡನ್ನು ಸಂಚರಿಸುತ್ತ ಕಾಶಿಗೆ ದಯಾಮಾಡಿಸಿ, ವಿದ್ವತ್ ಸಭೆಯಲ್ಲಿ ಶಿವಾದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ವಿಜಯಿಗಳಾದವರು. ಒಂದು ದಿನ ಇವರು ಪ್ರಯಾಗದಲ್ಲಿ ಲಿಂಗಪೂಜೆಗೆ ಕುಳಿತಿರುವಾಗ, ಜಂಗಮನೊಬ್ಬ ತನಗೆ ದೊರೆತ ಅನಾಥ ಜಂಗಮ ಶಿಶುವೊಂದನ್ನು ಇವರಿಗೆ ಅರ್ಪಿಸಿದನು. ಆ ಜಂಗಮ ಶಿಶುವೇ ಕಾಶೀಕರಿಬಸವ ಸ್ವಾಮಿಗಳವರೆಂದು ಪ್ರಸಿದ್ದರಾದ 5ನೆಯ ಪೀಠಾಧಿಪತಿಗಳು. ಚೆನ್ನವೀರಮಹಾಸ್ವಾಮಿಗಳವರು ಬಾಚಿಕೊಂಡನ ಹಳ್ಳಿಗೆ ದಯಮಾಡಿಸಿದಾಗ ಅಲ್ಲಿಯೇ ಶಿವಪೂಜಾ ಲೋಲರಾಗಿ ಇದ್ದು ಬಿಡುತ್ತಿದ್ದರು. ಹಾಗೆ ಒಂದು ಸಲ ಬಂದಾಗ ಬಾಚಿಕೊಂಡನ ಹಳ್ಳಿಯಲ್ಲಿಯೇ ಲಿಂಗೈಕ್ಯರಾಗಲು ಅಲ್ಲಯೇ ಇವರ ಗದ್ದುಗೆಯನ್ನು ಮಾಡಲಾಗಿದೆ. ಆ ಗದ್ದುಗೆ ಈಗಲೂ ಪೂಜೆಗೊಳ್ಳತ್ತಲಿದೆ. .

5. ಜ. ಕಾಶೀ ಕರಿಬಸವ ಶಿವಯೋಗಿಗಳವರು:.

ಜ. ಕಾಶೀ ಕರಿಬಸವ ಮಹಾಸ್ವಾಮಿಗಳವರು ಶ್ರೀ ಗವಿಮಠದ ಐದನೆಯ ಪೀಠಾಧಿಪತಿಗಳಾದರು. ಇವರು ಗುರುಗಳಾದ ಜ. ಚೆನ್ನವೀರ ಮಹಾಸ್ವಾಮಿಗಳವರಿಗೆ ಕಾಶಿಯಲ್ಲಿ ದೊರೆತ್ತಿದ್ದರಿಂದ ಕಾಶೀ ಕರಿಬಸವಸ್ವಾಮಿಗಳೆಂದು ಖ್ಯಾತರಾಗಿದ್ದಾರೆ. ಶ್ರೀ ಗವಿಮಠದ ದಾಸೋಹ ಮತ್ತು ಕನ್ನಡ ಹಾಗೂ ಸಂಸ್ಕøತ ಪಾಠಶಾಲೆಗಳನ್ನು ಊರ್ಜಿತವಾಗೊಳಿಸಿದರು. ಒಮ್ಮೆ ಶ್ರೀಮಠದಲ್ಲಿ ಭಕ್ತಿನೋರ್ವನು ಪ್ರಸಾದ ಪಂಕ್ತಿಯಲ್ಲಿ ಕುಳಿತು ರೋಗಪೀಡಿತ ಕೈಗಳಿಂದ ಪ್ರಸಾದ ಸ್ವೀಕರಿಸಲು ಬಾರದೆ ಹಾಗೇ ಕುಳಿತಿರುವಾಗ ಇದನ್ನರಿತ ಶ್ರೀಗಳವರು ಕರುಣಾ ದೃಷ್ಟಿಯಿಂದ ಅವನಲ್ಲಿಗೆ ತೆರಳಿ ಆಯುರ್ವೇದ ಚಿಕಿತ್ಸೆ ನೀಡಲು ಕೈಗಳು ಮೇಲಕ್ಕೆತ್ತಲು ಬಂದವು. ಇವರು ಕನಾಟಕದ ಉದ್ದಗಲಕ್ಕೂ ಸಂಚರಿಸುತ್ತ ಕೊಟ್ಟೂರು, ಮೈಸೂರು, ನಂಜುನಗೂಡು, ಡಂಬಳ ಹಾಗೂ ನವಿಲುಗುಂದಗಳನ್ನು ಸಂದರ್ಶಿದರು. ಗದಗಿನಲ್ಲಿದ್ದ ಭಕ್ತರ ಬಲವಾದ ಬಿನ್ನಹದ ಮೇರೆಗೆ ಅಲ್ಲಿಗೆ ತೆರಳಿ ಕೆಲವು ಕಾಲ ತಂಗಿರಲು ಅಲ್ಲಿಯೇ ಲಿಂಗದೊಳಗೆ ಬೆರೆದರು. ಅವರ ಗದ್ದುಗೆಯು ಗದುಗಿನ ಈಗಿನ ಜಗದ್ಗುರು ತೋಂಟದಾರ್ಯ ಮಠದಲ್ಲಿ ಮೂಲ ಕರ್ತೃ ಗದ್ದುಗೆಯಂತೆ ಪೂಜೆಗೊಳ್ಳತ್ತಲಿರುವುದನ್ನು ಗಮನಿಸಬಹುದಾಗಿದೆ. .

6. ಜ. ಶಿವಲಿಂಗ ಶಿವಯೋಗಿ.

ಐದನೆಯ ಪೀಠಾಧಿಪತಿಗಳಾದ ಜ. ಕಾಶೀಕರಿಬಸವ ಸ್ವಾಮಿಗಳವರಿಂದ ಅನುಗ್ರಹ ಪಡೆದರು. ಬೂದಿಹಾಳದ ಹಿರೇಮಠದ ಜ.ಶಿವಲಿಂಗ ಮಹಾಸ್ವಾಮಿಗಳವರು. ಇವರು ಸುಜ್ಞಾನಿಗಳು ವೈರಾಗ್ಯಶಾಲಿಗಳಾಗಿದ್ದರು. ಅನ್ನದಾನ ಜ್ಞಾನದಾನ ಮತ್ತು ಸದ್ಧರ್ಮದಾನಗಳನ್ನು ಅನವರತ ನಡೆಸುವವರಾಗಿದ್ದರು. ಇವರು ಕೊಪ್ಪಳ ಶ್ರೀ ಗವಿಮಠದ ಜವಾಬ್ದಾರಿಯನ್ನು ತಮ್ಮ ಉತ್ತರಾಧಿಕಾರಿಗಳಾದ ಪುಟ್ಟ ಸುಚೆನ್ನವೀರ ಮಹಾಸ್ವಾಮಿಗಳವರಿಗೆ ಒಪ್ಪಿಸಿ, ಹಿರೇವಡ್ಡಟ್ಟಿ, ಡಂಬಳ ಮೊದಲಾದ ಭಕ್ತರ ಕೋರಿಕೆಯ ಮೇರೆಗೆ ದಯಾಮಾಡಿಸಿ, ಸುಪ್ರಸಿದ್ದ ಕಪೋತಗಿರಿ (ಕಪ್ಪತಗುಡ್ಡ)ಗೆ ತೆರಳಿ ಆ ನಿಸರ್ಗ ರಮಣೀಯ ಸ್ಥಳದಲ್ಲಿ ತಪಸ್ಸನ್ನಾಚರಿಸಿದರು. ಆ ಸ್ಥಳವು ಇವರನ್ನು ಬಹುವಾಗಿ ಆಕರ್ಷಿಸಲು, ಅಲ್ಲಿಯೇ ನೆಲೆಸಿದರು. ಅಲ್ಲಿಯೇ ಸಮಾಧಿಯನ್ನು ಹೊಂದಿದರು. ಇವರ ಸಮಾಧಿಯು ನಂದಿವೇರಿ ಮಠದಲ್ಲಿ ಶೋಭಿಸುತ್ತ ಪೂಜೆಗೊಳ್ಳತ್ತಲಿದೆ..

7. ಜ. ಪುಟ್ಟ ಸುಚೆನ್ನವೀರ ಶಿವಯೋಗಿಗಳು:.

ಇವರು ಮಂಗಳೂರಿನ ಅರಳೆಲೆ ಮಠದ ಸಿದ್ದಯ್ಯನವರ ಮಕ್ಕಳು. ಇವರ ಗುರುಗಳಾದ ಜ. ಶಿವಲಿಂಗ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಿ ಪೀಠಾಧಿಪತಿಗಳಾದರು. ಭಕ್ತರ ಉಪಯೋಗಕ್ಕಾಗಿ ದನಕರುಗಳಿಗಾಗಿ ಶ್ರೀ ಮಠಕ್ಕೆ ಹೊಂದಿ ಕೆರೆಯನ್ನು ಕಟ್ಟಿಸಿದರು. ಗವಿಮಠ ಕೆರೆಗೆ ಹೊಂದಿಕೊಂಡಿರುವ ಕಲ್ಲುಬಂಡೆಯ ಮೇಲೆ ‘ಮಹಾಂತ ದೇವರು ಮಾಡಿಸಿದ ತೂಬು’ ಎಂಬ ಒಂದು ಸಾಲಿನ ಶಾಸವಿದೆ. ಶ್ರೀ ಗವಿಮಠದಲ್ಲಿದ್ದ ಮರಿದೇವರಾದ ಮಹಾಂತ ದೇವರೆಂಬುವರು ಈ ಕೆರೆಯ ತೂಬನ್ನು ನಿಂತು ಕಟ್ಟಿಸಿರಬೇಕು. ಶ್ರೀ ಗಳವರು ಮಠಕ್ಕೆ ಮಹಾದ್ವಾರವನ್ನು, ಬೆಟ್ಟದ ಮೇಲೇರಲು ಪಾವಟಿಗಳನ್ನು ಮಾಡಿಸಿ ಶ್ರೀ ಮಠವನ್ನು ಅಂದಗೊಳಿಸಿದರು ಗವಿಮಠದಲ್ಲಿದ್ದ ಶ್ರೀ ಚೆನ್ನಮಲ್ಲಿಕಾರ್ಜುನ ಮರಿದೇವರಿಗೆ ಪಟ್ಟಾಭಿಷೇಕ ಮಾಡಿಸಿ ಲಿಂಗೈಕ್ಯರಾದರು. ಇವರ ಸಮಾಧಿಯು ಕೊಪ್ಪಳ ಗವಿಮಠದಲ್ಲಾಗಿದೆ. .

8. ಜ. ಚೆನ್ನಮಲ್ಲಿಕಾರ್ಜುನ ಶಿವಯೋಗಿಗಳು:.

ಇವರು ಮೂಲತಃ ಕೊಪ್ಪಳದವರಾಗಿದ್ದು. ಜ. ಪುಟ್ಟ ಸುಚೆನ್ನವೀರ ಶಿವಯೋಗಿಗಳಿಂದ ಉತ್ತರಾಧಿಕಾರ ಪಡೆದರು. ಇವರು ಬಕ್ತರ ಬಯಕೆಯಂತೆ ಬಳ್ಳಾರಿ ಜಿಲ್ಲೆಯೆ ದೇವಗೊಂಡನ ಹಳ್ಳಿಗೆ ದಯಮಾಡಿಸಿ, ಅಲ್ಲಿಯೇ ಕೇಲವು ದಿವಸ ವಾಸವಾಗಿರುವಾಗ ಲಿಂಗೈಕ್ಯರಾಗಲು ದೇವಗೊಂಡನ ಹಳ್ಳಿಯ ಗವಿಮಠದಲ್ಲಿ ಇವರ ಗದ್ದುಗೆಯಿದ್ದು ಪೂಜೆಗೊಳ್ಳುತ್ತಿದೆ. .

9. ಜ. ಸಂಗನಬಸವ ಶಿವಯೋಗಿಗಳು :.

ಇವರು ಬಳ್ಳಾರಿ ಜಿಲ್ಲೆಯ ಬುಕ್ಕಸಾಗರದ ಹಿರೇಮಠದವರು. ಇವರು ಗವಿಮಠದ ಕೆರೆಯನ್ನು ವಿಸ್ತರಿಸಿದರು. ಕೆರೆಯ ದುರಸ್ತಿಯಲ್ಲಿ ತೊಡಗಿದ್ದ ಕಬ್ಬಿಣದ ಮಲ್ಲಪ್ಪನೆಂಬ ಭಕ್ತನ ಮೂಖಕ್ಕೆ ದೊಡ್ಡ ಕಲ್ಲೊಂದು ಸಿಡಿದು ಬಡಿಯಿತು. ದವಡೆಯು ಸೊಟ್ಟಾಯಿತು. ಶ್ರೀಗಳವರ ಅನುಕಂಪದಿಂದ ಚಿಕಿತ್ಸೆ ಮಾಡಿದರು.ಸೊಟ್ಟಾದ ದವಡೆಯು ಸರಿಯಾಯಿತು. ಇವರನ್ನು ಹೂವಿನ ಹಡಗಲಿಯ ಭಕ್ತರು ವಿಜೃಂಭಣೆಯಿಂದ ಬರಮಾಡಿಕೊಂಡರು. ಹೊಸ ಕಲ್ಲು ಮಠವನ್ನು ಕಟ್ಟಿಸಿದರಲ್ಲದೆ, ಶ್ರೀ ಮಠಕ್ಕೆ ಭೂದಾನ ಮಾಡಿದರು. ಮಕರಬ್ಬಿ, ಕತ್ತೆ ಬೆನ್ನೂರು, ಮಾಗಳ, ಹಗರಿ ಮೊದಲಾದ ಕತ್ತೆ ಬೆನ್ನೂರು, ಮಾಗಳ, ಹಗರಿ ಮೊದಲಾದ ಗ್ರಾಮಗಳಲ್ಲಿದ್ದ ಮಠಗಳನ್ನು ಜೀರ್ಣೋದ್ಧಾರಗೊಳಿಸಿದವರು. ಕಾಮಲಾಪುರದಲ್ಲಿ ಶ್ರೀ ಮಠಕ್ಕೆ ಗುರುಲಿಂಗ ಚರವರರನ್ನು ಸ್ವಾಮಿಗಳಾಗಿ ನೇಮಿಸಿದರು. ಕೊಪ್ಪಳಕ್ಕೆ ಹತ್ತಿರದ ಬಹಾದ್ದೂರ ಬಂಡಿಯಲ್ಲಿ ಕಟ್ಟಿಸಿದ ಹೊಸಮಠದ ಅಧಿಕಾರವನ್ನು ಸಿದ್ಧಲಿಂಗ ಮಹಾಸ್ವಾಮಿಗಳವರಿಗೆ ವಹಿಸಿಕೊಟ್ಟರು. ಮಕರಬ್ಬಿಯ ಶಾಖಾಮಠದಲ್ಲಿ ಇವರ ಗದ್ದುಗೆಯಿದ್ದು,ಇಂದಿಗೂ ಪೂಜೆಗೊಳ್ಳತ್ತಲಿದೆ. .

10. ಜ. ಚೆನ್ನಬಸವ ಶಿವಯೋಗಿಗಳು:.

ಇವರು ಮೂಲತಃ ಕೊಪ್ಪಳದವರು. ಜಗದ್ಗುರು ಗವಿಸಿದ್ಧೇಶ್ವರ ಶಿವಯೋಗಿಯ ಗುರುಗಳು, ಮಹಿಮಾ ಶಾಲಿಯಾದ ಗವಿಸಿದ್ಧೇಶ್ವರರ ಲೀಲೆಗಳನ್ನು ಕಂಡು ಹರ್ಷಿಸಿದರು. ಮಠಕ್ಕೆ ಯೋಗ್ಯ ಅಧಿಪತಿಯು ದೊರಕಿದನೆಂದು ಆನಂದಗೊಂಡರು. ಇವರ ಕಾಲಕ್ಕೆ ಕೊಪ್ಪಳ ಶ್ರೀ ಗವಿಮಠ ಹಾಗೂ ಗದುಗಿನ ಜಗದ್ಗುರು ತೋಂಟದಾರ್ಯಮಠಗಳ ನಡುವೆ ಅನ್ಯೊನ್ಯ ಸಂಬಂಧವಿತ್ತೆಂದು ತಿಳಿದು ಬರುತ್ತದೆ. ಶ್ರೀ ಗವಿಮಠದ ಮರಿದೇವರಾದ ಸದಾಶಿವ ಮಹಾಸ್ವಾಮಿಗಳವರು. ಗದ್ದುಗೆ ಕೊಪ್ಪಳ ಗವಿಮಠದಲ್ಲಿದ್ದು ತೋಂಟದ ಸ್ವಾಮಿ ಗದ್ದುಗೆಯೆಂದು ನಿತ್ಯ ಪೂಜೆಗೊಳ್ಳುತ್ತಿದೆ. ಗದಗದಲ್ಲಿ ನಡೆದಿದ್ದ ತೋಂಟದಪ್ಪಗಳವರ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗಿಗೆ ಅಡ್ಡಿಯುಂಟಾಗಲು ಗವಿಸಿದ್ಧೇಶ್ವರರು ಗದುಗಿಗೆ ದಯಮಾಡಿಸಿ ಮೆರವಣಿಗೆಯನ್ನು ಸಾಂಗವಾಗಿಸಿದರು. ಈ ಘಟನೆಯನ್ನು ವಿವರಿಸುವ ಮಂಗಳಾರತಿ ಪದ್ಯ ಗದಗ, ಕೊಪ್ಪಳ ಭಾಗದಲ್ಲಿ ಪ್ರಚಲಿತದಲ್ಲಿದೆ. .

ಮಂಗಲೆನ್ನೆ ಕುರುಂಗ ನಯನೆ | ತುಂಗ ಗುರು ಗವಿಸಿದ್ಧಗೆ |
ಮೀರಾಲಂ ಬಹಾದ್ದೂರಗಾಗಿಹ | ಕ್ರೂರ ರೋಗವ ತೋಲಗಿಸಿ
ಮೀರಿದಾ ಜಹಾಗೀರು ಪಡೆದ | ಧೀರ ಗಂಭೀರಗೆ
ಮೆರೆವ ತೋಂಟದ | ಪರಮ ಯೋಗಿಯ
ಮೆರವಣಿಗೆ ನಿಲ್ಲಲು | ಸ್ಮರಿಸಿದಾಕ್ಷಣ
ವರ ಉತ್ಸವವ | ಮೆರೆಸಿದನುಪಮ ಶೀಲಗೆ|
.

ಈ ಸಂತೋಷದಲ್ಲಿ ಜಗದ್ಗುರು ಸದಾಶಿವ ಮಹಾಶಿವಯೋಗಿಗಳವವರು ಕೊಪ್ಪಳಕ್ಕೆ ಆಗಮಿಸಿ ತಮ್ಮ ಉತ್ಸವವನ್ನು ನೆರವೇರಿಸಿ ಕೊಟ್ಟ ಗವಿಸಿದ್ಧೇಶ್ವರರ ಲೀಲೆಗಳನ್ನು ಕೊಂಡಾಡಿದರು. ಇದಕ್ಕೆ ಗವಿಸಿದ್ಧೇಶ್ವರರು ನಗುನಗುತ್ತ ‘ಇದೆಲ್ಲವೂ ನಮ್ಮುಭಯರಿಗೆ ಕರ್ತನಾದ ಚೆನ್ನಬಸವಸ್ವಾಮಿ ಗುರುಕೃಪೆ’ ಎಂದು ತಿಳಿಸಿದರು. ಹೀಗೇಯೆ ತೋಂಟದ ಜಗದ್ಗುರುಗಳವರು ತಮ್ಮ ಮಾತೃಮಠಕ್ಕೆ ಬರುತ್ತ ಹೋಗುತಲಿದ್ದು ಕೊಪ್ಪಳದಲ್ಲಿಯೇ ಲಿಂಗೈಕ್ಯರಾಗಲು ಶ್ರೀ ಗವಿಮಠದಲ್ಲಿಯೇ ಅವರ ಗದ್ದುಗೆಯಿದೆ. ಅದು ನಿತ್ಯ ಪೂಜೆಗೊಳ್ಳುತ್ತಲಿದೆ. ಹತ್ತನೆಯ ಪೀಠಾಧಿಪತಿಗಳಾದ ಜ. ಚೆನ್ನಬಸವ ಶಿವಯೋಗಿಗಳವರು ಮಹಿಮಾ ಪುರುಷರು. ಇವರು ರಾಯಚೂರು ಭಾಗದಲ್ಲಿ ಸಂಚರಿಸುತ್ತ ಮರಿಚೇಡನ್ನು ಸಮೀಪಿಸಿದಾಗ, ಹುರುಳಿ ನಾಗಪ್ಪನೆಂಬ ಬಡರೈತನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಂತ ಭಕ್ತಿಯಿಂದ ಸೇವೆ ಮಾಡಿದನು. ಅವನ ಭಕ್ತಿ ಸೇವೆಗೆ ಶ್ರೀಗಳವರು ಬಗೆದುಂಬಿ ಆಶೀರ್ವದಿಸಿದರು. ಶ್ರೀಗಳವರ ಕೃಪೆಗೆ ಪಾತ್ರನಾಗಿ ಹುರಳಿ ನಾಗಪ್ಪನು ಪೋತನಾಳ, ಮರಿಚೇಡು, ಮಣ್ಣೂರು, ಬಹಾದ್ದೂರಬಂಡಿ, ಬೇಟಗೇರಿ ಹಾಗೂ ಮಂಡಲಗಿರಿ ಗ್ರಾಮಗಳನ್ನು ಜಹಾಗೀರು ಪಡೆದು ‘ನಾಗನಾಥ ನಾಡಗೌಡ ರಾಜ ಬಹಾದ್ದೂರ’ನೆಂಬ ಬಿರಿದು ಹೊಂದಿ ಆಡಳಿತ ನಡೆಸಿದನು. ಇದೆಲ್ಲವೂ ಗವಿಮಠದಪ್ಪಗಳಾದ ಜ.ಚೆನ್ನಬಸವ ಶಿವಯೋಗಿಗಳ ಕೃಪೆಯೆಂದು, ಶ್ರೀ ಗವಿಮಠದ ಮುಖ ಮಂಟಪವನ್ನು ಕಟ್ಟಿಸಿದನು. ಇದಲ್ಲದೇ, ಹಿರೇಸಿಂದೋಗಿಯಲ್ಲಿಯ ಗವಿಮಠ ಹಾಗೂ ಉಗ್ರಾಣಗಳನ್ನು ಹೊಸದಾಗಿ ಕಟ್ಟಿಸಿದನು. ಮಕ್ಕಳಿಲ್ಲದ ಆನೆಗೊಂದಿಯ ದೊರೆಗೆ ಪುತ್ರಸಂತಾನವಾಗಲು ಶ್ರೀಮಠಕ್ಕೆ ಸಂಗಮೇಶ್ವರದಲ್ಲಿದ್ದ ಹೊಲಗದ್ದೆಗಳನ್ನು ದಾನವಾಗಿ ನೀಡಿದರು. .

11. ಜ. ಗವಿಸಿದ್ಧೇಶ್ವರ ಶಿವಯೋಗಿಗಳು

ಕೊಪ್ಪಳ ಹಾಗೂ ಕೊಪ್ಪಳ ನಾಡಿನ ಅಧಿದೈವತನಾದ ಗವಿಸಿದ್ಧೇಶ್ವರಸ್ವಾಮಿ ಶ್ರೀ ಗವಿಮಠ ಮೂಲ ಕರ್ತೃವೇ ಇದ್ದಿರಬೇಕೆಂಬ ಭಾವನೆಯಿದೆ. ಆದರೆ ಹೀಗಿರದೆ, ಶ್ರೀ ಗವಿಮಠದ ಭವ್ಯ ಪರಂಪರೆಯಲ್ಲಿ ಹನ್ನೊಂದನೆಯ ಶಿವಯೋಗಿಗಳಾಗಿದ್ದಾರೆ; ಮಹಾ ಮಹಿಮ ಪುರುಷರಾಗಿದ್ದಾರೆ. ಅನೇಕ ಉದ್ಧಾರದ ಕಾರ್ಯಗಳನ್ನು ಮಾಡಿದ್ದಾರೆ. ಅವರು ಗೈದ ಕಾರ್ಯಗಳು ಪವಾಡ ಸದೃಶವಾಗಿದೆ. ಇದರಿಂದಾಗಿ ತಮಗಿಂತ ಹಿಂದಿನವರನ್ನು ಮರೆಯಿಸಿ ಬಿಟ್ಟಿದ್ದಾರೆ. ಮುಂದಿನವರಿಗೆ ಭಕ್ತರ ಹೃನ್ಮಂದಿರದಲ್ಲಿ ಶಾಶ್ವತವಾದ ಸ್ಥಾನವನ್ನು ತೆರೆದಿಸಿದ್ದಾರೆ. ಗವಿಸಿದ್ಧೇಶ್ವರರಿಂದ ಶ್ರೀ ಗವಿಮಠವೆಂಬ ಅನ್ವರ್ಥಕ ಹೆಸರಾಯಿತು.
ಕೊಪ್ಪಳದ ಪಶ್ಚಿಮಕ್ಕಿರುವ ಬೆಟ್ಟದ ಹಿಂಬದಿಯಲ್ಲಿ ಮಂಗಳಾಪುರವೆಂಬ ಪುಟ್ಟ ಗ್ರಾಮವಿದೆ. ಇದು ಗವಿಸಿದ್ಧೇಶ್ವರರ ಜನ್ಮಸ್ಥಳ. ಅಲ್ಲಿಯ ಪ್ರತಿಯೊಂದು ಜಾತಿ ಜನಾಂದವರು ಗವಿಸಿದ್ಧೇಶ್ವರರಲ್ಲಿ ಅಪಾರ ಭಕ್ತಿಯನ್ನಿಟ್ಟುಕೊಂಡಿದ್ದಾರೆ. ಸ್ವಾಮಿಯ ಕೈಂಕರ್ಯವನ್ನು ಸದಾ ಮಾಡುವವರಾಗಿದ್ದಾರೆ. ಇಲ್ಲಿಯ ಮುಗ್ದ ದಂಪತಿಗಳಿಗೆ ಬಹಳ ಕಾಲದವರೆಗೆ. ಮಕ್ಕಳಲಾಗಿರಲಿಲ್ಲ. ನಿಸರ್ಗ ರಮಣೀಯ ಸ್ಥಳದಲ್ಲಿ ನೆಲೆಸಿರುವ ಮಳೆಮಲ್ಲೇಶ್ವರನಿಗೆ ಬೇಡಿಕೊಂಡು ಈ ಮಗುವನ್ನು ಪಡೆದರು. ಬಾಲ್ಯನಾಮ ಗುಡದಯ್ಯ. ಸಾಮನ್ಯರಂತೆ ಬೆಳೆದ ಮಗು ಊರಲ್ಲಿಯೇ ಮಠದ ಸ್ವಾಮಿಗಳವರ ಶಾಲೆಯಲ್ಲಿ ಓದು ಬರೆಹ ಕಲಿತು, ಬಹುಭಾವುಕನಾಗಿ ಚೆಲುವಿನ ತಾಣವಾದ ಹಾಗೂ ಆದಿ ಮಾನವನ ನೆಲೆಯಾಗಿದ್ದ ಮಳೆಮಲ್ಲೇಶ್ವರ ಗುಡ್ಡದಲ್ಲಿ ಗುಡ್ಡದಯ್ಯನಾಗಿ, ದನಗಾಹಿಯಾಗಿ ನಿತ್ಯವೂ ಅಲ್ಲಿಗೆ ಬಂದು, ಶಿವಧ್ಯಾನದಲ್ಲಿ ಸಮಾಧಿಸ್ತನಾಗಿ ಕುಳಿತಿರುತ್ತಿದ್ದನ್ನು ಅಲ್ಲಿಗೆ ಮೇಯಲು ಬಂದ ಕೊಪ್ಪಳದ ಮಾಲೀಗೌಡರ ಸತ್ತ ಆಕಳನ್ನು ಬದುಕಿಸಿದನು. ಪೋಲೀಸಗೌಡರ ಎಂಟೆತ್ತಿನ ನೇಗಿಲನ್ನು ಅವರ ಒಂಟೆತ್ತಿನಿಂದ ಜಗ್ಗಿಸಿದನು. ಒಂಟೆತ್ತು ಇಡೀ ದಿನ ಎಂಟರ ನೇಗಿಲನ್ನು ಎಳೆದು ಅಲ್ಲಿ ನೆರೆದ ಜನರನ್ನು ಚಕಿತಗೊಳಸಿತು. ಮಗುವನ್ನು ಮಾಲೀಗೌಡರು ಸಾಮಾನ್ಯನಲ್ಲವೆಂದು ತಮ್ಮ ಮನೆಗೆ ಕರೆದುಕೊಂಡು ಬಂದರು. ಸ್ವಾಭಿಮಾನಿಯಾದ ಗುಡದಯ್ಯ ಕಾಯಕ ಮಹತ್ವವನ್ನು ಸಾರಿ ಹೇಳಿದಂತೆ ಗೌಡರ ಮನೆಯಲ್ಲಿದ್ದು ಕೇವಲ ಊಟ ಮಾಡದೆ, ದನಕಾಯಲು ಗುಡ್ಡಕ್ಕೆ ಹೋಗುತ್ತಿದ್ದ. ಗುಡ್ಡ ಗುಡದಯ್ಯನ ಆಧ್ಯಾತ್ಮ ಸಾಧನೆಯ ಪವಿತ್ರ ತಾಣವಾಗಿತ್ತು. ಅಲ್ಲಿಯೇ ತನ್ನ ವ್ಯಕ್ತಿತ್ವ ವಿಕಸನದ ತೊಡಗಿರುತ್ತಿದ್ದನು.ಈ ಸಾಧನೆ ಕಂಡ ಜನರು ಈತ ಸಾಮನ್ಯರಂತಲ್ಲವೆಂದು ಮಾತಾಡಿಕೊಳ್ಳಹತ್ತಿದರು.
ಕೋಟೆಯಲ್ಲಿ ಗೌಡರ ಮನೆಯಿಂದ ಬಾಲ ಗವಿಸಿದ್ಧನು ಹೊರಟಿದ್ದನು. ಅಲ್ಲಿಯ ಕಮ್ಮಾರ, ಕುಲುಮೆಯಲ್ಲಿ ಚಕ್ಕಡಿ (ಬಂಡಿ)ಯ ಇರಸನ್ನು ನಿಗಿ ನಿಗಿ ಕೆಂಡದಂತೆ ಕಾಯಿಸಿದ್ದ. ಅಲ್ಲಿದ್ದವರು ಗುಡದಯ್ಯನಿಗೆ ಸವಾಲು ಹಾಕಿದರು. ಥಟ್ಟನೆ ಕೆಂಡದಂತೆ ಕಾಯ್ದ ಕಬ್ಬಿಣದ ಇರಸನ್ನು ಕೈಯಲ್ಲಿ ಹಿಡಿದು ದಾಂಡಿನಂತೆ ತಿರುವಿದನು. ಅದೇ ಓಣಿಯ ಮರಾಠರ ಹೆಣ್ಣುಮಗಳ ಸತ್ತ ಬಾಲಕನನ್ನು ಬದುಕಿಸಿದನು. ಈತನೇ ಬಾಲಗವಿಸಿದ್ಧೇಶ್ವರ. ದಿನ ದಿನವೂ ಈತನ ಬಾಲ ಲೀಲೆಗಳು ಜರುಗಹತ್ತಿದವು. ಗೌಡರ ಮನೆಯೇ ಮಠವಾಯಿತು. ಇದನ್ನರಿತ ಗೌಡರು, ‘ಈ ಮಗು ಇನ್ನು ನಮ್ಮಲ್ಲಿರಲು ಯೋಗ್ಯನಲ್ಲ’ ವೆಂದು ಶ್ರೀ ಗವಿಮಠದ ಆಗಿನ 10ನೇ ಪೀಠಾಧಿಪತಿಗಳಾಗಿದ್ದ ಜಗದ್ಗುರು ಚೆನ್ನಬಸವೇಶ್ವರ ಮಹಾಸ್ವಾಮಿಗಳವರ ಸಾನಿಧ್ಯಕ್ಕೆ ಪೋಲೀಸಗೌಡರೊಂದಿಗೆ ಗುಡದಯ್ಯನನ್ನು ತಂದೊಪ್ಪಿಸಿದರು. ಮಾಲೀಗೌಡರ ಮನೆ ತೊರೆದು ಹೋಗುವಾಗ ಮನೆಮಂದಿಯೆಲ್ಲ ಅಗಲಿ ಹೋಗುತ್ತಿರುವ ದುಃಖ ತಡೆಯಲಾರದೆ. ಅಳುತ್ತಾ ಕರೆಯುತ್ತಾ ಅಡ್ಡನಿಂತರು. ಅವರನ್ನು ಸಮಾಧಾನ ಪಡಿಸಿ, ತನ್ನಕುರುಹಾಗಿ ತನ್ನ ಜಡೆಯನ್ನು ಕಿತ್ತುಕೊಟ್ಟನು. ಇಂದಿಗೂ ಅದು ಮಾಲೀಗೌಡರ ಮನೆಯ ದೇವರ ಜಗಲಿಯ ಮೇಲೆ ದೇವರ ಜಗಲಿಯ ಮೇಲೆ ಪೂಜೆಗೋಳ್ಳತ್ತಲಿದೆ. ಮಾಲೀಗೌಡರಿಗೆ ಇದರಿಂದ ಜಡೆಗೌಡರೆಂದು ಹೆಸರಾಯಿತು. ಜೈನರಾದ ಪೋಲೀಸಗೌಡರು ಬಾಲಗವಿಸಿದ್ಧನಲ್ಲಿ ಅಪಾರ ಭಕ್ತಿಯನ್ನು ಹೊಂದಿದ್ದರು. ಆತ ಬಾಲಕನಾಗಿದ್ದಾಗ ಅವರ ಮನೆ ಮುಂದಿನ ಕಟ್ಟೆಯ ಮೇಲೆ ಕುಳಿತಿರುತ್ತಿದ್ದನು. ಆತನು ಇವರನ್ನು ಬಿಟ್ಟು ಗವಿಮಠಕ್ಕೆ ಹೊರಟಿನಿಂತಾಗ ದುಃಖಿಸಲು ತಾನು ದಿನಾಲೂ ಕುಳಿತಿರುತ್ತಿದ್ದ ಸ್ಥಳದಲ್ಲಿಯೇ ಒಂದುಗುಡಿಕಟ್ಟಿಸಿರೆಂದು ತಿಳಿಸಿದನು. ಹಾಗೆ ಅಂದು ಬಾಲಗವಿಸಿದ್ಧೇಶ ಕುಳಿತ ಸ್ಥಳ ಶಿವಮಂದಿರವಾಗಿದೆ. ಜೈನರಾದ ಪೋಲಿಸಗೌಡರು ತಮ್ಮ ಮನೆ ಮುಂದಿರುವ ಈಶ್ವರ ಲಿಂಗಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಗವಿಸಿದ್ಧೇಶ್ವರ ಜಾತ್ರಾ ಕಾಲದಲ್ಲಿ ಉತ್ಸವಮೂರ್ತಿಯು ಮೆರವಣಿಗೆಯೊಂದಿಗೆ ಇಲ್ಲಿಯವರೆಗೆ ಬರುತ್ತದೆ. ಗವಿಸಿದ್ಧೇಶ್ವರ ಬಾಲಕನಾಗಿದ್ದಲೇ ಧಾರ್ಮಿಕ ಸಹಿಷ್ಣುತೆ ಬೋಧಿಸಿದ, ಸಾದಿಸಿದ. ಸಿರಸಪ್ಪಯ್ಯನಮಠ, ಮರ್ದಾನ್ ಗಾಯಿಬ್, ಸೈಲಾನ್ ಪಾಶಾ ದರ್ಗಾ, ರಾಜಾಬಕ್ಷಿ ದರ್ಗಾ, ದೇವಾಂಗಮಠ, ಪಾಶ್ರ್ವನಾಥ ಬಸದಿ, ವೆಂಕಟರಮಣ ದೇವಸ್ಥಾನ, ರಾಮದೇವರ ಮಂದಿರ, ಶಂಭುಲಿಂಗೇಶ್ವರ ಹಾಗೂ ರಾಯರಮಠ ಮುಂತಾದ ದೇವಾಲಯಗಳ, ದರ್ಗಾಗಳ, ಬಸದಿಗಳ ತಾಣವಾಗಿರುವ ಕೊಪ್ಪಳ ಶರಣರ ದಾಸರ, ಸೂಫಸಂತರ ನಾಡಿದು. ವೀರರ ಬಿಡಿದು. ‘ಅವರವರ ಧರ್ಮ ಅವರವರಿಗೆ ಶ್ರೇಷ್ಠ ಯಾರೇ ಆದರೂ ಧರ್ಮಿಷ್ಟರಾಗಿ ಬಾಳಿ ಬದುಕಬೇಕೆಂಬ’ ಗವಿಸಿದ್ಧೇಶ್ವರ ಹಾಕಿಕೊಟ್ಟ ಸಂದೇಶ ಇಂದಿಗೂ ಹುಸಿಯಾಗಿಲ್ಲ.
ಗವಿಸಿದ್ಧೇಶ್ವರರು ಅಮವಾಸ್ಯೆಯೆಂದು ಆಕಾಶದಲ್ಲಿ ಪೂರ್ಣ ಚಂದ್ರ ಉದಸಿದ್ದನ್ನು ತೋರಿಸಿದರು. ಹುಣಶಿಹಾಳ ಗೌಡರ ಮನೆಯ ಹೆಣ್ಣು ಕೂಸು ಗಂಡು ಕೂಸಾದುದು ಜನಜನಿತವಾಗಿದೆ. ಇಂದಿಗೂ ಆ ಮನೆತನದವರು ಗವಿಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಶ್ರೀ ಗವಿಮಠದ ಪರಂಪರೆಯಲ್ಲಿ ಆಯುರ್ವೇದಕ್ಕೆ ಹಿರಿಯದಾದ ಸ್ಥಾನವಿದೆ. ತಮ್ಮ ಆಯುರ್ವೇದ ಚಿಕಿತ್ಸಾಪದ್ದತಿಯಿಂದಾಗಿ, ಮಠದ ಪ್ರಸಾದ ಮಹಿಮೆಯಿಂದಾಗಿ, ಗವಿಸಿದ್ಧೇಶ್ವರರ ತಪಸ್ಸಿನ ಸಿದ್ಧಯಿಂದಾಗಿ, ಹೈದರಾಬಾದಿನ ನವಾಬ ಮೀರಾಲಂ ಬಹಾದ್ದೂರರÀ ಕುಷ್ಠರೋಗ ನಿವಾರಣೆಯಾಗಿದ್ದರಿಂದ ಹಿರೇಬಗನಾಳ ಗ್ರಾಮವನ್ನು ‘ಜಹಾಗೀರಾಗಿ ಗವಿಮಠಕ್ಕೆ 1801ರಲ್ಲಿ ನೀಡಿದನು ಅಂದಿನಿಂದ ಗವಿಮಠ ಸಂಸ್ಥಾನ ಗವಿಮಠದೊಂದಿಗೆ ‘ಜಹಾಗೀರ ಮಠ’ ವೆಂದು ಪ್ರಸಿದ್ದಿ ಪಡೆಯಿತು. ಆಗಿನ ಕಾಲದ ಜಹಾಗೀರದಾರರಿಗಿದ್ದ ಮಾನ, ಸನ್ಮಾನಗಳು ಬಿರುದು ಬಾವಲಿಗಳು ಇಲ್ಲಿಯ ಮಠಾಧೀಶರಿಗೆ ದೊರಕಿದ್ದತ್ತಿದ್ದವು. ತಿಮ್ಮಾಪುರದ ಕುರಬರ ಬೀರಪ್ಪನ ಮಗನಿಗೆ ಹನ್ನೇರಡು ವರ್ಷವಾಗಿದ್ದರೂ ಮಾತನ್ನಾಡಲೂ ಬರುತ್ತಿರಲಿಲ್ಲ. ಗವಿಸಿದ್ದೇಶ್ವರರು ಅನುಗ್ರಹಿಸಲು ಮಾತಡ ಹತ್ತಿದನು. ಇದೇ ಬಾಗದ ಕಳ್ಳರ ಗುಂಪೊಂದು ಕಳ್ಳತನ ಮಾಡಲು ಶ್ರೀಮಠಕ್ಕೆ ಬಂದಿತು. ಕಳ್ಳರ ಹಿರಿಯನನ್ನು ಮಠದ ಗುರುವನ್ನಾಗಿ ಮಾಡಿ ತಮ್ಮ ಶಾಖಾ ಮಠವೊಂದಕ್ಕೆ ಕಳಿಸಿಕೊಟ್ಟು ಕಳ್ಳರನ್ನು ಉದ್ಧರಿಸಿದರು. ಕುರುಡರು ಗದ್ದುಗೆಯನ್ನು ಕಟ್ಟಿ ಕಣ್ಣನ್ನು ಪಡೆದರು. ಹಿರೇಸಿಂದೋಗಿ ಭರಮಪ್ಪನ ಜೋಳದರಾಶಿ ಹುಲುಸಾಯಿತು. ಗಜೇಂದ್ರಗಡ ದೊರೆಗಳ ಕುಮಾರಿಗೆ ಹಿಡಿದ ಬ್ರಹ್ಮರಾಕ್ಷಸವನ್ನು ತಮ್ಮ ಸಾಮಾಥ್ರ್ಯದಿಂದ ಬಿಡಿಸಿದರು. ಇದರಿಂದಾಗಿ ಗವಿಮಠದಲ್ಲಿ ಪಾಠಶಾಲೆ, ಪ್ರಸಾದ ನಿಲಯ ಇವೆ. ಅಳವಂಡಿಯ ಆರೇರ (ಮರಾಠ) ಮನೆತನಕ್ಕೆ ಸೇರಿದ ಬಂಜೆಯ ಗುಪ್ತ ಭಕ್ತಿಗೆ ಮೆಚ್ಚಿ ಗಂಡು ಮಗುವನ್ನು ಕರುಣಿಸಿದರು. ಈ ಸವಿನೆನಪಿಗಾಗಿ ಇಂದಿಗೂ ಅಳವಂಡಿಯಲ್ಲಿ ಸಣ್ಣ ಶ್ರಾವಣ ಸೋಮವಾರದಂದು ಗವಿಸಿದ್ಧೇಶ್ವರನ ವೈಭವಯುತ ಉತ್ಸವವು ಜರುಗುವುದು.

ಗವಿಸಿದ್ಧೇಶ್ವರ ಸಜೀವ ಸಮಾಧಿ:

ಗವಿಸಿದ್ಧೇಶ್ವರ ಸಜೀವವಾಗಿ ಶ್ರೀಮಠದಲ್ಲಿ ನೆಲೆಸಿದ್ದಾನೆ. ಹೀಗಾಗಿ ಜಾಗೃತಸ್ಥಾನವೆಂದು, ಪುಣ್ಯಕ್ಷೇತ್ರವೆಂದು ಭಕ್ತರು ನಂಬಿದ್ದಾರೆ. ಗವಿಸಿದ್ಧೇಶ್ವರರು ತಮ್ಮ ಗುರುಗಳಾದ ಜ. ಚೆನ್ನಬಸವ ಮಹಾಸ್ವಾಮಿಗಳವರು ತಾವು ಲಿಂಗದಲ್ಲಿ ಬೆರಯುವ ವಿಷಯ ತಿಳಿಸಲು, ಗುರುಗಳ ಅಗಲಿಕೆಯ ಅನುತಾಪ, ಅವರ ಸೇವೆಯು ಅಲಭ್ಯವಾಗುವುದೆಂದು ಮನನೊಂದು, ಗುರುಗಳಿಗಾಗಿ ಸಿದ್ದ ಪಡಿಸಿದ ಸಮಾಧಿಯನ್ನು ಪ್ರವೇಶಿಸಿ, ಲಿಂಗ ಪೂಜೆಯಲ್ಲಿ ಕುಳಿತು ಬಿಟ್ಟನು. ಅಂದು ಶಾಲಿವಾನಶಕೆ 1735, ಶ್ರೀಮುಖ ಸಂವತ್ಸರ ಪುಷ್ಯ ಬಹುಳ ಬಿದಿಗೆ ಕ್ರಿ.ಶ. 11-1-1813 ಬುಧವಾರದಂದು ತಮ್ಮ ಪ್ರಾಣವನ್ನು ಬ್ರಹ್ಮರಂಧ್ರವಕ್ಕೇರಿಸಿ ಸಜೀವ ಸಮಾಧಿ ಸ್ಥಿತಿಯನ್ನು ಹೊಂದಿದರು. ಅನಿವಾರ್ಯವಾಗಿ ಗುರುಗಳೇ ನಿಂತು ಶಿಷ್ಯನ ಸಮಾಧಿ ಮಾಡಿದರು. ಸಜೀವ ಸಮಾಧಿ ಸ್ಥಿತಿ ಪಡೆದ ದಿನದಿಂದ ಗುರಗಳೇ ನಿಂತು ಜಾತ್ರಾ ಮಹೋತ್ಸವವನ್ನು ನೆರವೇರಿಸ ಹತ್ತಿದರು. ಗುರುಗಳಿಂದಲೇ ಗೌರವ ಪಡೆದುಕೊಂಡ ಮಹಾಶಿವಯೋಗಿ ಸಜೀವ ಸಮಾಧಿ ಸಂಯುತ ಜಗದ್ಗುರು ಗವಿಸಿದ್ಧೇಶ್ವರ! ಇದು ಜಾಗೃತ ಸ್ಥಾನವಾಗಿರುವದರಿಂದ ಭಕ್ತರು ಶ್ರದ್ಧೆಯಿಂದ ನಡೆದುಕೊಳ್ಳತ್ತಾರೆ; ತಮ್ಮ ಇತ್ಯಾರ್ಥ, ಸಿದ್ಧಿಗಳನ್ನು ಪಡೆದುಕೊಳ್ಳುತ್ತಾರೆ.

12.ಜ. ಹಿರಿಯ ಶಾಂತವೀರ ಶಿವಯೋಗಿಗಳು:

ಜ. ಗವಿಸಿದ್ದೇಶ್ವರರು ಕೊಟ್ಟೂರಿಗೆ ದಯಮಾಡಿಸಿದಾಗ, ಊರ ಹೊರವಲಯದ ಬನ್ನಿಗಿಡದ ಬುಡದಲ್ಲಿ ಮಲಗಿದ್ದ ಈ ಜಂಗಮ ಬಾಲಕನ ಮೇಲೆ ನಾಗರಹವೊಂದು ಹೆಡೆ ಬಿಚ್ಚಿಕೊಂಡು ಆಡುತ್ತಿದ್ದುದ್ದನ್ನು ಕಂಡರು. ಈ ಕುವರನನ್ನು ತಮಗೊಪ್ಪಿಸಬೇಕೆಂದು ತಂದೆ ತಾಯಿಗಳಿಗೆ ತಿಳಿಸಿ ಮಗುವನ್ನು ಕರೆದು ತಂದು ಜೋಪಾನ ಮಾಡಿದರು ಗವಿಸಿದ್ಧೇಶ್ವರರ ಕೃಪೆಗೆ ಪಾತ್ರರಾದ ಜ. ಹಿರಿಯ ಶಾಂತವೀರ ಶಿವಯೋಗಿಗಳು ಚರಿತ್ರೆಯು ಅಗಾಧವಾದುದು. ಅಂತೆಯೇ ಆ ಕಾಲದ ಮಹಾ ಮಹಿಮಾ ಪುರುಷರಿಂದಸ್ತುತಿಸಲ್ಪಟ್ಟಿದ್ದಾರೆ. ಮೈಲಾರದ ಶ್ರೀ ಬಸವಲಿಂಗ ಶರಣರು ಇವರನ್ನು ಶಿವಾನುಭವ ದರ್ಪಣದಲ್ಲಿ:
ಗವಿಶಾಂತವೀರ ನಿಜದನು/ ಭವದ ಸಾರ|
ಭುವನದೊಳಿಹ ಶಿವಶರಣ ಗಣಂಗಳ|
ತವಕದೊಳವಿರತ ಪೊರೆವ ಸುಧೀರ|
ಮುನ್ನಿನಾದಿನಾಥ ನಂಬಿದ | ರನ್ನು ಪೊರೆವ ದಾತ|
ಅನ್ಯವನರಿಯದೆ| ತನ್ನ ಭಜಿಸುತಿಹ|
ಚೆನ್ನವೀರ ಮದ್ ಗುರು ಗುರುವರನೀತ
ಎಂದು ನೆನದಿದ್ದಾರೆ. ‘ಚೆನ್ನವೀರ ಮದ್ ಗುರು ಗುರುವರನೀತ’ ನೆಂದು ಭಕ್ತಿ ಭಾವದಿಂದ ನೆನೆದಿರುವುದರಿಂದ ಮೈಲಾರದ ಬಸವಲಿಂಗ ಶರಣರ ಗುರುಗಳಾದ ಲಿಂಗನಾಯಕನಹಳ್ಳಿ ಶ್ರೀ ಚೆನ್ನವೀರ ಶಿವಯೋಗಿಗಳವರ ಗುರುಗಳಿವರೆಂದು ತಿಳಿದು ಬರುತ್ತದೆ. ಇವರ ಸಮಕಾಲೀನವರಾದ ಮುಳುಗುಂದದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳವರು ಲಿಂಗನಾಯಕನಹಳ್ಳಿ ವಿರಕ್ತಮಠದ ಶ್ರೀ ಶಿವಯೋಗಿ ಚೆನ್ನವೀರ ಸ್ವಾಮಿಗಳವರನ್ನು ಆಶ್ರಯಿಸಿ, ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಸುದಾಗಿ ತಿಳಿಯುತ್ತದೆ. ಮುಂದೆ ಸಂಚಾರಕ್ಕೆ ಹೊರಟು ಕಪೋತಗಿರಿಯಲ್ಲಿ ಕಡೆಯ ಕೊಳ್ಳದಲ್ಲಿದ್ದ ತಪಸ್ವಿಗಳಾದ ಶಾಂತವೀರ( ಹಿರಿಯ) ಸ್ವಾಮಿಗಳವರ ದರ್ಶನ ತೆಗೆದುಕೊಂಡು, ಅವರಿಂದ ಜ್ಞಾನೋಪದೇಶ ಹೊಂದಿದರು ಎಂದು ಪ್ರೊ. ಶಿ.ಶಿ ಬಸವನಾಳರು ಉಲ್ಲೇಖಿಸಿದ್ದಾರೆ.
ಕಪೋತಗಿರಿಯ ಕಡೆಕೊಳ್ಳದಲ್ಲಿದ್ದ ಆ ತಪಸ್ವಿಗಳೇ ಶ್ರೀ ಗವಿಮಠದ ಜ. ಹಿರಿಯ ಶಾಂತವೀರ ಶಿವಯೋಗಿಗಳವವರು ಎಂದು ತಿಳಿಯಲು ಕೈವಲ್ಯ ದರ್ಪಣದಲ್ಲಿ ಇವರನ್ನು ಕುರಿತ ಪದ್ಯಗಳು ಆಧಾರವಾಗಿವೆ. ಅಲ್ಲದೆ ಮೈಲಾರದ ಶ್ರೀ ಬಸವಲಿಂಗ ಶರಣರು ಮುಳಗುಂದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳು, ಲಿಂಗನಾಯಕನಹಳ್ಳಿ ಶ್ರೀ ಚೆನ್ನವೀರ ಶಿವಯೋಗಿಗಳವರ ಶಿಷ್ಯರಾಗಿದ್ದು, ತಮ್ಮ ಗುರುವಿನ ಗುರುವಾದ ಹಿರಿಯ ಶಾಂತವೀರ ಸ್ವಾಮಿಗಳವರನ್ನು ‘ಚೆನ್ನವೀರ ಮದ್‍ಗುರು ಗುರುವನೀತ’ ಎಂದು ಭಕ್ತಿ ಗೌರವಗಳಿಂದ ತಮ್ಮ ಕೃತಿಗಳಲ್ಲಿ ಸ್ತುತಿಸಿರುವುದು ಸಹಜವಾಗಿದೆ. ಕಪೋತಗಿರಿ ಶ್ರೀ ಗವಿಮಠದ ಶಾಖಾಮಠವಾದ ನಂದಿವೇರಿಮಠವು ಇದ್ದು ಅಲ್ಲಿಯೇ ಆ ಪರಂಪರೆಯ 6ನೆಯ ಪೀಠಾಧಿಪತಿಗಳಾದ ಜ. ಶಿವಲಿಂಗ ಶಿವಯೋಗಿಗಳವರ ಗದ್ದುಗೆ ಇರುವುದು. 12ನೆಯವರಾದ ಇವರ ಗದ್ದುಗೆಯು ಕೂಡ ಕಪೋತ ಗಿರಿಯ ನಂದಿವೇರಿ ಮಠದಲ್ಲಿದೆ.
ಧನ್ಯನಾದೆನು ಶಂತವೀರ ಸ್ವಾಮಿ
ನಿನ್ನ ಪಾದಾರವಿಂದವ ಕಂಡುದ್ಧಾರ ||ಪಲ್ಲವಿ||
ಚಿದ್ಗವಿಯೊಳಗಿರುವಂಥ | ನಿತ್ಯ|
ಮದ್ಗುರು ಚರರೂಪದಿ ಚರಿಪಂತ
ಸದ್ಗುಣಗಣನುಳ್ಳ ಶಾಂತ | ಕರ |
ಗದ್ಗಿಯೊಳಗೆ ಮಹಾಂತ ಲಿಂಗಾಗಿ ನಿಂತ
ಒಡೆಯ ಶಾಂತವೀರ ನಿಮಗೆ |
ಬಿಡದೆ ಕರ್ಮ ಸತ್ಕಾರ್ಯಗಳ |
ಹಿಡಿಯದೆಗ್ಗು ಮಾಡುತಿರುವೆ ತಡೆಯಲೇತಕೆ |
ಕೂಸಿನುಪಚಾರಗಳ ತಾಯಿ | ಹೇಸಿಕೊಳದೆ ಮಾಡುವಂತೆ
ಈಶ ಶಾಂತವೀರ ನಿಮಗೆ ಹೇಯವಿಲ್ಲವು
ನಾಶರಹಿತ ಭೇದವನು ಲೇಸು ಮಾತ್ರ ಉಳಿಯಲಿಲ್ಲ
ಈಸು ಪರಿಯ ಶೌಚ ಕ್ರಿಯೆಗಳೆಲ್ಲ ಮಾಡಿದೆ
ಹುಡುಗನಿದಕೆ ಮಾಡಬಹುದೆ | ಒಡೆಯತನಕೆ ಭಂಗವೆಂಬ
ಒಡಕ ಬುದ್ದಿ ನಿಮಗೆ ಸ್ವಪ್ನದೊಳಗೆತೊರೆದು |
ಮೃಡನ ರೂಪ ಶಾಂತವೀರ | ಕಡೆಯ ಮಹಾಂತ ಲಿಂಗ ಶಿಶು
ನಡೆಯ ಕಲೆಯ ತಿಳಿದ ನಿಮಗೆ ಪಡಿಯ ಕಾಣೆನು
* * *
ತೂಗುವ ಬನ್ನಿರೆ ಮಹಾಗುರು ಶಾಂತೀಶ್ವರನ
ರಾಗದ ಪುತ್ರ ಮಹಾಂತನ ||ಪಲ್ಲ||
ತಾನೆ ಪರಶಿವ ಮಹಾಜ್ಞಾನಿ ನಿರಂಜನ ಶೂನ್ಯ
ಸಿಂಹಾಸನದ ಕರ್ತನು |
ಶೂನ್ಯ ಸಿಂಹಾನದ ಕರ್ತನು
ಶಿವಯೋಗದ ಧ್ಯಾನ ಸಮಾಧಿಯ ವಿರಕ್ತನು
ನಾದಾತ್ಮಕ ಶರಣು ಪಾದರೇಣುವ ತಮ್ಮ
ಮೋದದಿಂ ತೆಗೆದಾಕೃತಿ ಮಾಡಿ |
ವೇದದಿಂ ತೆಗೆದಾಕೃತಿ ಮಾಡಿ | ಶಿವ ಕಳೆಯಿಟ್ಟ
ಅನಾದಿ ಶಿಶು ಮಹಾಂತ ಲಿಂಗನು

13. ಜ. ಶಿವಶಾಂತವೀರ ಶಿವಯೋಗಿಗಳು

ಇವರು ಕೊಪ್ಪಳ ತಾಲೂಕಿನ ಬಿಸರಳ್ಳಿಯ ಬೃಹನ್ಮಠ (ಹಿರಿಯಮಠ) ಶಿವಬಸವಾರ್ಯಶಾಸ್ತ್ರೀಗಳ ಜೇಷ್ಠ ಪುತ್ರರು. ಜ. ಹಿರಿಯ ಶಾಂತವೀರ ಮಹಾಸ್ವಾಮಿಗಳವರ ಕೃಪೆಗೆ ಪಾತ್ರರಾಗಿ 13ನೆಯ ಪೀಠಾಧಿಪತಿಳಾದರು. ಇವರು ‘ಹುಚ್ಚಪ್ಪ ಸ್ವಾಮಿ’ ಯೆಂದು ಪ್ರಸಿದ್ಧಿರಾಗಿದ್ದರು; ಈ ಉಚ್ಚತರದ ಮಹಾತ್ಮರು. ಮಕ್ಕಳನ್ನು ಬೇಡಿ ದಂಪತಿಗಳು ಬಂದಾಗ ಬಂಜೆಯ ಮೊಲೆಯುಂಡು ಹಾಲು ತರಿಸಿ ಬಂಜೆತನ ನೀಗಿದ ಅಸಮಾನ್ಯ ಶಿವಯೋಗಿಗಳು. ಕೊಪ್ಪಳ ತಾಲೂಕಿನ ಕವಲೂರಿನ ಕಟಗಿಹಳ್ಳಿಮಠದ ಕೊಟ್ಟೂರಯ್ಯನವರು ಮಕ್ಕಳಿಲ್ಲದೆ ಪುತ್ರಾರ್ಥಿಗಳಾಗಿ ಬಂದು ಸೇವೆಗೈಯಲು ತೀರ್ಥಪ್ರಸಾದಗಳನ್ನಿತ್ತು ಆಶೀರ್ವದಿಸಿದರು. ಗುರುಬಸಯ್ಯನೆಂಬ ಮಗನು ಜನಿಸಿದನು. ಇಂದಿಗೂ ಗುರುಬಸಯ್ಯನವರ ಪುಣ್ಯ ತಿಥಿಯನ್ನು ಕವಲೂರಿನಲ್ಲಿ ಆಚರಿಸುತ್ತಿದ್ದು, ಶ್ರೀ ಗವಿಮಠದ ಚರವರರು ಹೋಗಿ ಕಾಣಿಕೆಗಳನ್ನು ಪಡೆಯುವವರು. ಗುರುಬಸಯ್ಯನವರು ಉದ್ಧರಣ ಸಾಹಿತ್ಯ ರಚಿಸಿದ್ದಾರೆ.
ವೀರಶೈವ ಸಾಹಿತ್ಯದಲ್ಲಿ ಇದೊಂದು ಸ್ವಾಮಿಗಳ ಅಪರೂಪದ ಸಾಹಿತ್ಯ ಪ್ರಕಾರ. ಗುರುಬಸವ ಸ್ವಾಮಿಗಳು ಶಿಷ್ಯರೊಡನೆ ಹುಲಗಿ(ಮುನಿರಾಬಾದ) ಗ್ರಾಮಕ್ಕೆ ಆಗಮಿಸಿ, ತುಂಗಭದ್ರನದಿಗೆ ದಯಮಾಡಿಸಿದಾಗ ಜಡಿಮಳೆಯು ಸುರಿಯ ಹತ್ತಿತ್ತು. ಹುಲಿಗೆಮ್ಮದೇವಿಯ ಗುಡಿಯಲ್ಲಿಯೇ ತಂಗಿದರು. ಸರಿ ರಾತ್ರಿಯಾಯಿತು. ಮಳೆ ಬಿಡಲಿಲ್ಲ. ಲಿಂಗಪೂಜೆಯಿಲ್ಲ; ಲಿಂಗಾರ್ಪಿತವಿಲ್ಲ! ಭಕ್ತರೆಲ್ಲ ಚಿಂತಾತುರರಾದರು. ಹುಲಿಗೆಮ್ಮದೇವಿಯೇ ಶಿವಯೋಗಿಗಳ ಸೇವೆಗೆ ತೊಡಗಿದಳು. ದೇವಿಯು ಮಲಗಿದ ಪೂಜಾರಿಯ ಕನಸ್ಸಿನಲ್ಲಿ ಬಂದು ‘ಶಿವಯೋಗಿ ವರ್ಯರ ಪೂಜೆ ಪ್ರಸಾದಗಳಿಗಾಗಿ ಅಣಿಗೊಳಿಸು, ಏಳು, ಎದ್ದೇಳು, ನನ್ನ ಮಂದಿರಕ್ಕೆ ನಡೆ, ಎಂದು ಆಜ್ಞಾಪಿಸಿದಳು. ಎಚ್ಚರಗೊಂಡ ಪೂಜಾರಿಯು ಸಕಲ ಸಾಮಗ್ರಿಗಳೊಂದಿಗೆ ಆಗಮಿಸಿ ಎಲ್ಲವನ್ನು ಅಣಿಗೊಳಿಸಿ ಭಕ್ತರಿಷ್ಟಾರ್ಥದಂತೆ ದೇವಿಯು ತನ್ನ ವದನದಿಂದ ಲಿಂಗಾರ್ಪಿತಮಾಡಲು ಬಿನ್ನವಿಸಿಕೊಂಡಳು. ಗುರುಬಸವಯ್ಯಗಳವರ ಸಾಮಥ್ರ್ಯವನ್ನು ಕಂಡು ಭಕ್ತರು ಬೆರಗಾದರು. ಇವರ ಗುರುಗಳವರ ಗದ್ದುಗೆಯು ಕೊಪ್ಪಳ ಗವಿಮಠದಲ್ಲಾಗಿದೆ.

14. ಜ. ಮರಿಶಾಂತವೀರ ಶಿವಯೋಗಿಗಳು:

ಜ. ಶಿವಶಾಂತವೀರ ಮಹಾಸ್ವಾಮಿಗಳವರ ನಂತರ ಕೊಪ್ಪಳ ಶ್ರೀ ಗವಿಮಠದ ಪೀಠಾಧಿಪತಿಗಳಾದವರು ಕೊಪ್ಪಳ ತಾಲೂಕಿನ ಮಾದಿನೂರು ಬೃಹನ್ಮಠದ ಗುರುಬಸವಯ್ಯನವರ ಮಕ್ಕಳು. ಜ. ಮರಿಶಾಂತವೀರ ಮಹಾಸ್ವಾಮಿಗಳವರೆಂಬ ಅಭಿದಾನದಿಂದ ಅಧಿಕಾರಕ್ಕೆ ಬಂದರು. ಇವರು ಪರಂಪರೆಯ ಶಿವಯೋಗಿಗಳಂತೆ ಭಕ್ತರುದ್ದಾರ ಮಾಡುತ್ತ ನಡೆದಿರುವುದನ್ನು ಕಾಣುತ್ತೇವೆ. ಇವರ ಗದ್ದುಗೆಯು ಕೊಪ್ಪಳ ಗವಿಮಠದಲ್ಲಾಗಿದೆ.

15. ಜ. ಶಿವಶಾಂತವೀರ ಮಹಾಸ್ವಾಮಿಗಳವರು (ಗಡ್ಡದಜ್ಜಾ ಅವರು)

ಇವರು 14ನೆಯ ಪೀಠಾಧಿಪತಿಗಳಾಗಿದ್ದ ಜ. ಮರಿಶಾಂತವೀರ ಮಹಾಸ್ವಾಮಿಗಳವರು ತಾಮ್ರಗುಂಡಿಗೆ ದಯಮಾಡಿಸಿದಾಗ ‘ಅನ್ನದಾನಿ’ ಎಂಬ ಮಗುವನ್ನು ತಮ್ಮ ಹಿಂದೆ ಕರೆದುಕೊಂಡು ಬಂದರು ಅನ್ನದಾನಿಯೇ ಜ. ಶಿವಶಾಂತವೀರ ಮಹಾಸ್ವಾಮಿಗಳವರು ಎಂಬ ಅಭಿದಾನದಿಂದ 15ನೆಯ ಪೀಠಾಧಿಪತಿಳಾದರು. ಇವರ ಭಾವಚಿತ್ರವನ್ನು ಗವಿಮಠದಲ್ಲಿ ನೋಡಬಹುದು. ಇವರು ಗಡ್ಡದಜ್ಜಾ ಅವರೆಂದು ಪ್ರಸಿದ್ದರಾಗಿದ್ದಾರೆ. 1909ನೆಯ ಡಿಸೆಂಬರ ತಿಂಗಳಿನಲ್ಲಿ ಬಳ್ಳಾರಿಯಲ್ಲಿ ವೀರಶೈವ ಮಹಾಸಭೆಯು 5ನೆಯ ಮಹಾ ಅಧಿವೇಶನವು ಸೋಲ್ಲಾಪುರದ ವಾರದ ಮಲ್ಲಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಅಧಿವೇಶನದಲ್ಲಿ ಗಡ್ಡದಜ್ಜಾ ಅವರು ಪುಸ್ತಕ ವ್ಯಾಪಾರಿಯೊಬ್ಬನೊಡನೆ ಸಂಸ್ಕøತದಲ್ಲಿ ಮಾತನಾಡುತ್ತಿದ್ದ ಸೂಡಿಯ ಜುಕ್ತಿ ಹಿರೇಮಠದ ಗುರುನಂಜಯ್ಯನೆಂಬ ವಿದ್ಯಾರ್ಥಿಯನ್ನು ತಮ್ಮ ಮುಂದಿನ ಪೀಠಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಗುರು ನಂಜಯ್ಯನವರು ಕಾಶಿಯಲ್ಲಿ 9ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಡುತ್ತಿರುವಾಗಲೇ ಇವರೇ ಮುಂದಿನ ಪೀಠಾಧಿಪತಿಯೆಂಬ ಮೃತ್ಯುಪತ್ರ ಮಾಡಿಸಿ ಕಡ್ಲಬಾಳ ಮಠದಲ್ಲಿ ಲಿಂಗೈಕ್ಯರಾದರು. ಆ ಕಾಲದ ಅಂದರೆ 1922ರ ಅಂದಾಜಿಗೆ ಅವರ ಭೌತಿಕ ಕಾಯವನ್ನು ಕಡ್ಲಬಾಳದಿಂದ ಕೊಪ್ಪಳದ ಭಕ್ತರು ವಿಶೇಷವಾಗಿ ಮುದ್ಗಲ್ಲ ಸಂಗಪ್ಪ ಮುಂತಾದವರು. ತಂದು ಕೊಪ್ಪಳ ಕೊಪ್ಪಳ ಮಠದಲ್ಲಿ ಗದ್ದುಗೆ ಮಾಡಿಸಿದರು.
ಗಡ್ಡದಜ್ಜಾ ಅವರು ವಿದ್ಯಾ ಪ್ರೇಮಿಗಳು, ಒಕ್ಕಲುತನ ಪ್ರೇಮಿಗಳಾಗಿದ್ದರು. ಅಂತೆಯೇ ಕೊಪ್ಪಳ ಶ್ರೀ ಗವಿಮಠದಲ್ಲಿ ಆ ಕಾಲದ ಸಂಸ್ಕøತದಲ್ಲಿ ಘನವಿದ್ವಾಂಸರಾದ ಪಂ. ಕೊಂಗವಾಡ ವೀರಭದ್ರಶಾಸ್ತ್ರಿಗಳು ಹಿರೇಮಠ ಇವರನ್ನು ಸಂಸ್ಕøತ ಪಾಠಶಾಲೆಯಲ್ಲಿ ಅಧ್ಯಾಪಕರನ್ನಾಗಿರಿಸಿದ್ದರು. ಇವರ ಕೈಯಲ್ಲಿ ಬಳ್ಳಾರಿ ಹತ್ತಿರದ ಯೇಳುಬೆಂಚಿ (ವೈ) ನಾಗೇಶ ಶಾಸ್ತ್ರಿಗಳವರು ಓದಿ, ಹುಬ್ಬಳ್ಳಿಯಲ್ಲಿ ಜರುಗಿದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಾದ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿಲಿಟ್ ಪಡೆದರು. ಮೈಸೂರು ಹಾಗೂ ಸೊಂಡೂರು ಮಹಾರಾಜರಿಂದ ಆಸ್ಥಾನ ವಿದ್ವಾನ್‍ರೆಂದು ಗೌರವಿಸಲ್ಪಟ್ಟಿದ್ದರು. ಕಾಳಿದಾಸನ ಕೃತಿಗಳನ್ನು, ಭಗವದ್ಗೀತೆಯನ್ನು ಕನ್ನಡಕ್ಕೆ ತಂದಿದ್ದಾರೆ. ಹಲವಾರು ಪುರಾಣಗಳನ್ನು ರಚಿಸಿದ್ದಾರೆ. ಕೊನೆಯಲ್ಲಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಪುರಾಣ ರಚಿಸಿ ಮಾತೃ ಸಂಸ್ಥೆಯ ಋಣವನ್ನು ತೀರಿಸಿದ್ದಾರೆ. ಇವರಿಗೆ ಗೌರವ ಟಾಕ್ಟೊರೇಟ್ ಕರ್ನಾಟಕ ವಿವಿಯಿಂದ ದೊರಕಿದಾಗ ಗವಿಮಠದಲ್ಲಿ ಸನ್ಮಾನಿಸಲಾಯಿತು. ಗಡ್ಡದಜ್ಜಾ ಅವರು ಇವರಿಗೆ ಭವಿಷ್ಯ ನುಡಿದು ಇದರಂತಾಗುವಿ ಎಂದು ಆಶೀರ್ವದಿಸಿದ್ದರು. ಕನ್ನಡದ ಆಧುನಿಕ ಮಹಾಕವಿಯೊಬ್ಬನನ್ನು ಕೊಪ್ಪಳ ಗವಿಮಠ ಕೊಡುಗೆಯಾಗಿ ನೀಡಿದೆ.

16. ಜಗದ್ಗುರು ಮರಿಶಾಂತವೀರ ಶಿವಯೋಗಿಗಳವರು:

1922ರ ಡಿಸೆಂಬರ್ ತಿಂಗಳಿನಲ್ಲಿ ಸೂಡಿಯ ಜುಕ್ತಿ ಹಿರೇಮಠದ ಗುರುನಂಜಯ್ಯ(ಶ್ರೀಕಂಠ)ನವರು 16ನೆಯ ಪೀಠಾಧಿಪತಿಗಳಾಗಿ ಶ್ರೀ ಮನ್ನಿರಂಜನ ಎಂಬ ಹೆಸರಿನಿಂದ ಕಂಪ್ಲಿಯ ಕಲ್ಲುಮಠದ ಪೂಜ್ಯ ಶ್ರೀ ಗಳವರಿಂದ ಅನುಗ್ರಹಿತರಾಗಿ ಪೀಠಾಧಿಪತಿಗಳಾದರು. ಇವರು ನ್ಯಾಯ, ತರ್ಕ, ಹಾಗೂ ಶೈವ ಸಿದ್ದಾಂತಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದಾರೆ. ಯೋಗಶಾಸ್ತ್ರದಲ್ಲಿ ಕಾಶಿಯಲ್ಲಿದ್ದ ಬಂಗಾಳಿ ದಂಪತಿಗಳಿಂದ ತರಬೇತಿ ಪಡೆದಿದ್ದರು. ಆಯುರ್ವೇದದಲ್ಲಿ ವಿದ್ವಾಂಸರಾಗಿದ್ದರು. ಬಾಲ್ಯದಲ್ಲಿ ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರ ಪಾಠಶಾಲೆಯಲ್ಲಿ ಓದುತ್ತಿರುವಾಗ ಗುರುಲಿಂಗ ಜಂಗಮ ದಾಸೋಹ ಮಾಡಿಕೊಂಡಿದ್ದ ನಾಲ್ವತ್ತವಾಡದ ಪೂಜ್ಯ ಶ್ರೀ ವೀರೇಶ್ವರ ಶರಣರ ಕ್ರಿಯಾಮೂರ್ತಿಗಳಾಗಿ ಅವರ ವಿಶ್ವಾಸಕ್ಕೆ, ಗೌರವಕ್ಕೆ ಪಾತ್ರರಾಗಿದ್ದರು.
ತಾವು ಪೀಠಾಧಿಪತಿಗಳಾಗಿನಿಂದಲೂ ಶ್ರೀ ಮಠದ ದಾಸೋಹದಲ್ಲಿ ಬಡ ವಿದ್ಯಾರ್ಥಿಗಳನ್ನು ಹಳ್ಳಿಗಳಿಂದ ಬರಮಾಡಿಕೊಂಡು ಆಶ್ರಯವನ್ನಿತ್ತು ವಿದ್ಯಾದಾನ ಮಾಡಿದರು. ಇವರು ಆಯುರ್ವೇದದಲ್ಲಿ ಬಲ್ಲವರಾಗಿದ್ದುದರಿಂದ ಗವಿಮಠದಲ್ಲಿ ವಿದ್ಯಾರ್ಥಿಗಳಿಗೆ ಆಯುರ್ವೇದ ಚಿಕಿತ್ಸಾ ವಿಧಾನದ ಪಾಠ ಹೇಳಿ ಆಯುರ್ವೇದ ವೈದ್ಯರ ತಂಡವನ್ನು ನಿರ್ಮಾಣ ಮಾಡಿದ್ದಲ್ಲದೆ, ಆ ಕಾಲದ ಅವಶ್ಯಕತೆಗೆ ಅನುಗುಣವಾಗಿ ಇಂಜೆಕ್ಷನ್ ಥೆರಪಿಯನ್ನು ಸ್ಥಳೀಯ ವೈದ್ಯರಿಂದ ಕೊಡಿಸಿ ಅವರನ್ನು ಯಶಸ್ವಿ ವೈದ್ಯರನ್ನಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರು 1951ರಲ್ಲಿ ಶ್ರೀ ಗವಿಸಿದ್ಧೇಶ್ವರ ಮಿಡ್ಲಸ್ಕೂಲಿಗೆ ಶ್ರೀ ಬಿಸಿ ಪಾಟೀಲರನ್ನು ಸಂಸ್ಥಾಪಕ ಮುಖ್ಯಾಧ್ಯಾಪಕರನ್ನಾಗಿಸಿ ಶಾಲೆ ಪ್ರಾರಂಭಿಸಿದರು. ಮುಂದೆ ಅದು ಪ್ರಸಿದ್ದವಾದ ಶ್ರೀ ಗವಿಸಿದ್ಧೇಶ್ವರ ಪ್ರೌಡಶಾಲೆಯಾಯಿತು. 1963ರಲ್ಲಿ ಶ್ರೀ ಗವಿಮಠದ ಆಸ್ತಿ 400ಏಕರೆ ಜಮೀನನ್ನು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ರಸ್ಟಿಗೆ ನೀಡಿ ಅದನ್ನು ಸ್ಥಾಪಿಸುವ ಮೂಲಕ ಶ್ರೀ ಗವಿಸಿದ್ಧೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಆರಂಭಿಸಿದರು. ಈ ಮಹಾವಿದ್ಯಾಲಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿಯೇ ಶ್ರೇಷ್ಠ ಮಹಾವಿದ್ಯಾಲಯ ಒಂದಾಗಿ ಪ್ರತಿವರ್ಷ ಹಲವಾರು ರ್ಯಾಂಕುಗಳನ್ನು ಪಡೆದುಕೊಳ್ಳುತ್ತದೆ. ಹಲವಾರು ಸುಸಂಸ್ಕತ ನಾಗರಿಕರನ್ನು ಹಾಗೂ ಕ್ರೀಡಾಪಟುಗಳನ್ನು, ಈ ಮಹಾವಿದ್ಯಾಲಯ ನೀಡಿದೆ.

17. ಜ. ಶಿವಶಾಂತವೀರ ಮಹಾಸ್ವಾಮಿಗಳವರು:

Gavisiddeshwara ಇವರು ಸೂಡಿಯ ಜುಕ್ತಿ ಹಿರೇಮಠದ ಜಗದೀಶ್ವರಯ್ಯ ಹಾಗು ಬಸಮ್ಮನವರ ಪುತ್ರರು. ಇವರು ಗವಿಮಠದಲ್ಲಿ ಜ. ಮರಿಶಾಂತವೀರ ಮಹಾಸ್ವಾಮಿಗಳವರಲ್ಲಿದ್ದು ಓದಿ ಮುಂದೆ ಸೂಡಿಯಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿ ಗಂಗಾವತಿ ತಾಲೂಕಿನ ಹೊಸಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾಗ ಅದಕ್ಕೆ ರಾಜೀನಾಮೆ ಸಲ್ಲಿಸಿ, ಸೂಡಿ ಜುಕ್ತಿ ಹಿರೆಮಠದ ಪಟ್ಟಾಧ್ಯಕ್ಷರಾದರು. 1966 ಅಕ್ಟೋಬರ್ ತಿಂಗಳಿನಲ್ಲಿ ಸೂಡಿಯ ಜುಕ್ತಿ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಷ.ಬ್ರ ಉಮಾಪತಿ ಶಿವಾಚಾರ್ಯರನ್ನು ಲಿಂ. ಜ. ಮರಿಶಾಂತವೀರ ಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿಕೊಂಡರು. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿಗೆ ಮಠದ ಆಸ್ತಿಯಾಗಿದ್ದ 400 ಎಕರೆ ಜಮೀನ ನೀಡುವಾಗ ಇವರ ಒಪ್ಪಿಗೆ ಕೇಳಿದರು. ಆಗ ಪೂಜ್ಯ ಶಿವಶಾಂತವೀರ ಮಹಾಸ್ವಾಮಿಗಳವರು ತಾವು ಅನುಗ್ರಹಿಸಿದ ಜೋಳಿಗೆ, ನೀಡಿದ ಬೆತ್ತ ಹಾಗೂ ತಮ್ಮ ಸಂಪೂರ್ಣ ಕೃಪೆ ಇದ್ದರೆ ಸಾಕು. ಆಸ್ತಿ, ಅಂತಸ್ತು, ಅಧಿಕಾರ ತಮಗೆ ಬೇಡವೆಂದು ಸಾಷ್ಟಾಂಗ ಹಾಕಿದ್ದನ್ನು ಭಕ್ತರು ಬಲ್ಲರು.
ಇವರು ಶ್ರೀ ಗವಿಮಠದ 63 ಶಾಖಾಮಠಗಳನ್ನು ಸಂದರ್ಶಿಸಿ ಅವುಗಳ ಜೀರ್ಣೋದ್ಧಾರ ಮಾಡಿ ಅಲ್ಲಲ್ಲಿ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ ವಿದ್ಯಾದಾನಕ್ಕೆ ಪ್ರೋತ್ಸಾಹ ನೀಡಿದರು. ಕಡ್ಲಬಾಳು, ಹೂವ್ವಿನ ಹಡಗಲಿ, ಬಿಸರಳ್ಳಿ , ಕಾಮಾಲಾಪುರ, ಬುಕ್ಕಸಾಗರ ಹಾಗೂ ಹಿರೇಬಗನಾಳ ಮಠಗಳಿಗೆ ಮರಿದೇವರನ್ನು ನೇಮಿಸಿದರು. ಅಲ್ಲಲ್ಲಿ ರಥೋತ್ಸವಗಳಾಗುವಂತೆ ಏರ್ಪಾಡು ಮಾಡಿದರು. ಇವರ ಕಾಲದಲ್ಲಿ ಕೊಪ್ಪಳ ಗವಿಮಠವು ಅನೇಕ ಅಬಿವೃದ್ದಿಗಳನ್ನು ಪಡೆಯಿತು. ಮಹಾದ್ವಾರ ನಿರ್ಮಾಣ, ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪ, ಪಕ್ಕದಲ್ಲಿ ಅಥಿತಿಗಳಾಗಾಗಿ ಸುಸಜ್ಜಿತ ವಸತಿ ಗೃಹಗಳ ನಿರ್ಮಾಣ ಮಾಡಿದ್ದಾರೆ. ಹೊಸದಾಗಿ ಟ್ರಸ್ಟ್ ಆಫೀಸ್ ಕಟ್ಟಿಸಿದರು. ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜು ಆರಂಭಿಸಿದರು. ಅವರು ಭಕ್ತರಿಗಾಗಿ, ಭಕ್ತರ ಏಳಿಗಾಗಿ ತಮ್ಮ ದೇಹವನ್ನು ಶ್ರೀ ಗಂಧದ ಕೊರಡಿನಂತೆ ತೇಯ್ದುಕೊಂಡರು. ಅವರು ಭಕ್ತರ ಬಯಸಿದ್ದೆಲ್ಲೆಲ್ಲ ಹಗಳಿರುಳೆನ್ನದೆ, ಹೋಗಿ ಅವರನ್ನು ಆಶೀರ್ವದಿಸಿ ಬಂದರು. ಭಕ್ತರ ಕಷ್ಟಗಳಿಗೆ ಪರಿಹಾರ ನೀಡುತ್ತಿದ್ದರು. ಮಕ್ಕಳಿಲ್ಲದವರಿಗೆ ಮಕ್ಕಳ ನೀಡುವ ನಡೆದಾಡುವ ಗವಿಸಿದ್ಧೇಶ್ವರರೆಂದೇ ಪ್ರಖ್ಯಾತರಾಗಿದ್ದಾರೆ. ಪೂಜ್ಯ ಜ. ಶಿವಶಾಂತವೀರ ಮಹಾಸ್ವಾಮಿಗಳವರು ತಮ್ಮ ಅನಾರೋಗ್ಯದ ನಿಮಿತ್ಯ ದಿ 13-12-2002 ರಂದು ವಿಜೃಂಭಣೆಯಿಂದ ಈಗಿನ 18ನೆಯ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರಿಗೆ ಪಟ್ಟಾಭಿಷೇಕ ಮಹೋತ್ಸವವನ್ನು ಏರ್ಪಡಿಸಿ ಅಧಿಕಾರಿ ನೀಡಿ ಅನುಗ್ರಹಿಸಿದರು. ಅವರು ದಿ. 26-3-2003ರಲ್ಲಿ ಲಿಂಗೈಕ್ಯರಾದರು. ಗವಿಸಿದ್ಧೇಶ್ವರರ ಜಾತ್ರೆಗೆ ಸೆರಿದಂತೆ ಭಕ್ತರು ಸೇರಿ ಅವರಿಗೆ ತಮ್ಮ ಗೌರವ ಹಾಗೂ ಭಕ್ತಿಯನ್ನು ಅರ್ಪಿಸಿದರು. ಲಿಂಗೈಕ್ಯ ಶ್ರೀಗಳವರು ಈಗಿಲ್ಲವಾದರೂ ಅವರು ನಡೆದಾಡಿದ ನಿಂತ ಸ್ಥಳದಲ್ಲಿ ಸುಳಿದು ಸೂಸುವ ಗಾಳಿಯಲ್ಲಿ ನೆಲಿಸಿದ್ದಾರೆ.

ಸಂಸ್ಥಾನ ಶ್ರೀ ಗವಿಮಠದ ಪೇಸ ಬುಕ್ ಪುಟವನ್ನು ಲೈಕ್ ಮಾಡಿ

ಶರಣು ಬನ್ನಿ

Snow

1. ಶ್ರೀ ರುದ್ರಮುನಿ ಶಿವಯೋಗಿಗಳು
2. ಶ್ರೀ ಸಂಗನಬಸವ ಶಿವಯೋಗಿಗಳು
3. ಜ. ಶಿವಲಿಂಗ ಶಿವಯೋಗಿಗಳು
4. ಜ. ಚೆನ್ನವೀರ ಶಿವಯೋಗಿಗಳು
5. ಜ. ಕಾಶೀ ಕರಿಬಸವ ಶಿವಯೋಗಿಗಳು
6. ಜ. ಶಿವಲಿಂಗ ಶಿವಯೋಗಿಗಳು
Lights
7. ಜ. ಪುಟ್ಟ ಸುಚೆನ್ನವೀರ ಶಿವಯೋಗಿಗಳು
8. ಜ. ಚೆನ್ನಮಲ್ಲಿಕಾರ್ಜುನ ಶಿವಯೋಗಿಗಳು
9. ಜ. ಸಂಗನಬಸವ ಶಿವಯೋಗಿಗಳು
10. ಜ. ಚೆನ್ನಬಸವ ಶಿವಯೋಗಿಗಳು
11. ಜ. ಗವಿಸಿದ್ಧೇಶ್ವರ ಶಿವಯೋಗಿಗಳು
12. ಜ. ಹಿರಿಯ ಶಾಂತವೀರ ಶಿವಯೋಗಿಗಳು
Snow

13. ಜ. ಶಿವಶಾಂತವೀರ ಶಿವಯೋಗಿಗಳು
14. ಜ. ಮರಿಶಾಂತವೀರ ಶಿವಯೋಗಿಗಳು
15. ಜ. ಶಿವಶಾಂತವೀರ ಮಹಾಸ್ವಾಮಿಗಳವರು
16. ಜಗದ್ಗುರು ಮರಿಶಾಂತವೀರ ಶಿವಯೋಗಿಗಳವರು
17. ಜ. ಶಿವಶಾಂತವೀರ ಮಹಾಸ್ವಾಮಿಗಳವರು
18. ಜ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು

ಸಂಗ್ರಹ ವಿಭಾಗ


Contact Us

Address

Samsthan Shree Gavimath

State:Karnataka Dist:Koppal Tq: Koppal At: Koppal-583231

08539-220212

 srigavimathkoppal@gmail.com

Follow Us

Powered by w3.css

Go To Top